ಎಸ್.ಕೆ.ಕೃಷ್ಣ ನಿಧನಕ್ಕೆ ಎಚ್.ಆಂಜನೇಯ ಸಂತಾಪ

1 Min Read

ಚಿತ್ರದುರ್ಗ: ಡಿ.10 : ರಾಜ್ಯ, ರಾಷ್ಟ್ರ ರಾಜಕಾರಣದಲ್ಲಿ ಎಲ್ಲ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿ, ಸಮರ್ಥವಾಗಿ ನಿಭಾಯಿಸಿದ ಬೆರಳೆಣಿಕೆ ರಾಜಕಾರಣಿಗಳಲ್ಲಿ ಎಸ್.ಕೆ.ಕೃಷ್ಣ ಪ್ರಮುಖರು. ಅವರ ಅಗಲಿಕೆ ನಾಡಿಗೆ ಬಹುದೊಡ್ಡ ನಷ್ಟವನ್ನುಂಟು ಮಾಡಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಸಂತಾಪ ವ್ಯಕ್ತಪಡಿಸಿದ್ದಾರೆ.

ಇಡೀ ಜಗತ್ತು ಕರ್ನಾಟಕದ ಕಡೆ ತಿರುಗಿ ನೋಡುವ ರೀತಿ ಐಟಿ-ಬಿಟಿ ಮೂಲಕ ಬೆಂಗಳೂರನ್ನು ಕಟ್ಟಿದ ರೀತಿ, ಜೊತೆಗೆ ಉದ್ಯೋಗ ಸೃಷ್ಠಿಗೆ ಅಗತ್ಯ ಯೋಜನೆ ರೂಪಿಸಿದ ದೂರದೃಷ್ಟಿ ರಾಜಕಾರಣಿ. ಅವರು ಬೆಂಗಳೂರನ್ನು ಐಟಿ-ಬಿಟಿ ಹೆಬ್ಬಾಗಿಲು ಆಗಿಸುವಲ್ಲಿ ಶ್ರಮಿಸಿದ್ದು ವಿಶೇಷ.
ಸೌಮ್ಯ ರಾಜಕಾರಣಿ ಎಸ್.ಎಂ.ಕೃಷ್ಣ ಅಗಲಿಕೆ ತೀವ್ರ ನೋವುಂಟು ಮಾಡಿದ್ದು, ಅತ್ಯುತ್ತಮ ಸಂಸದೀಯ ಹಿರಿಯ ಪಟು ಆಗಿದ್ದರು. ಸಮಾಜವಾದಿ ಹಿನ್ನೆಲೆಯಿಂದ ಬಂದ ಎಸ್.ಎಂ.ಕೃಷ್ಣ, ಇಂದಿರಾಗಾಂಧಿ ಅವರ ಜನಪರ ಆಡಳಿತಕ್ಕೆ ಆಕರ್ಷಿತರಾಗಿ ಕಾಂಗ್ರೆಸ್ ಸೇರಿ ಲೋಕಸಭೆ, ವಿಧಾನಸಭೆ ಸದಸ್ಯರು, ಸ್ಪೀಕರ್, ಮಂತ್ರಿ, ಮುಖ್ಯಮಂತ್ರಿ, ರಾಜ್ಯಪಾಲ, ಕೇಂದ್ರ ಸಚಿವ ಸೇರಿ ರಾಷ್ಟ್ರದ ಬಹುತೇಕ ಎಲ್ಲ ಉನ್ನತ ಹುದ್ದೆಗಳನ್ನು ಅಲಂಕರಿಸಿ ಸಮರ್ಥವಾಗಿ ನಿಭಾಯಿಸಿದ ಖ್ಯಾತಿ ಅವರಿಗೆ ಸಲ್ಲುತ್ತದೆ.

ಬೆಂಗಳೂರನ್ನು ಐಟಿ-ಬಿಟಿಯ ಹೆಬ್ಬಾಗಿಲು ಮಾಡಿದ ಕೀರ್ತಿ ಜತೆಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಹೀಗೆ ಅನೇಕ ಜನಪರ ಕಾರ್ಯಕ್ರಮಗಳನ್ನು ಕೊಟ್ಟ ಮಹಾನ್ ನಾಯಕ ಎಸ್.ಎಂ.ಕೃಷ್ಣ ಅವರಿಗೆ ಸಲ್ಲುತ್ತದೆ.

ಕೆಂಗಲ್ ಹನುಮಂತಯ್ಯ ವಿಧಾನಸಭೆ ಕಟ್ಟಿದರೆ, ಎಸ್.ಎಂ.ಕೃಷ್ಣ ವಿಕಾಸಸೌಧ ನಿರ್ಮಾಣ ಮಾಡುವ ಮೂಲಕ ದೂರದೃಷ್ಟಿಯ ರಾಜಕಾರಣಿ ಎಂಬುದನ್ನು ತಮ್ಮ ಆಡಳಿತದ ಮೂಲಕ ದೃಢಪಡಿಸಿದ ರಾಜಕಾರಣಿ.
ಕಾಡುಗಳ್ಳ ವೀರಪ್ಪನ್ ನಾಡಿನ ವರನಟ ಡಾ.ರಾಜಕುಮಾರ್ ಅವರನ್ನು ಅಪಹರಣ ಮಾಡಿದ ಸಂದರ್ಭ ಆ ಸವಾಲನ್ನು ಮೆಟ್ಟಿನಿಂತು ಕನ್ನಡದ ಕಣ್ಮಣಿಯನ್ನು ನಾಡಿಗೆ ಕರೆತಂದಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗುವಂತ ಘಟನೆ. ಇಂತಹ ಅಪರೂಪದ ರಾಜಕಾರಣಿಯ ಮಾಗದರ್ಶನ ನಾಡಿಗೆ ಇನ್ನಷ್ಟು ಕಾಲ ಬೇಕಿತ್ತು ಎಂದು ಎಚ್.ಆಂಜನೇಯ ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *