ಚಿತ್ರದುರ್ಗ,(ಡಿ,27) : ನಗರದ ಗಾರೆಹಟ್ಟಿಯ ಬೃಹನ್ಮಠ ಪ್ರೌಢಶಾಲೆಯಲ್ಲಿ 1987 ರಿಂದ 1990 ರವರೆಗೆ ಕಲಿತು ಇದೀಗ ವಿವಿಧ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಹಳೆಯ ವಿದ್ಯಾರ್ಥಿಗಳು ಸೇರಿ ತಾವು ಕಲಿತ ಶಿಕ್ಷಕ ವೃಂದಕ್ಕೆ ಗೌರವ ಸಲ್ಲಿಸುವ ಸಲುವಾಗಿ ಸಮ್ಮಿಲನಗೊಂಡರು.ಸೇರಿದ 70ರಿಂದ 75 ಸದಸ್ಯರು ಬೆಳಿಗ್ಗೆಯಿಂದಲೇ ಆಗಮಿಸಿದರು.
ಒಬ್ಬರಿಗೊಬ್ಬರು ಪರಸ್ಪರ ತಮ್ಮ ಹಳೆಯ ನೆನಪುಗಳನ್ನು ವಿನಿಮಯ ಮಾಡಿಕೊಂಡರು.ಸದ್ಯದಲ್ಲಿ ಮಾಡಿಕೊಂಡಿರುವ ವೃತ್ತಿ, ಸಂಸಾರ,ಮಕ್ಕಳ ವಿದ್ಯಾಭ್ಯಾಸ ಹೀಗೆ ಹತ್ತಾರು ವಿಚಾರಗಳು ಇಲ್ಲಿ ಸುಳಿದಾಡಿದವು.ಅವು ಖುಷಿ ಕೊಟ್ಟವು ಎಂದು ಸೇರಿದ ಅನೇಕರ ಅಭಿಪ್ರಾಯವಾಗಿತ್ತು.ಇಂತಹ ಸಮ್ಮಿಲನ ಆಗಾಗ ನಡೆದು ಚರ್ಚೆ ನಡೆಸುವ ಮೂಲಕ ಶಿಕ್ಷಣ ಪಡೆದ ಸಂಸ್ಥೆಗೆ ಮತ್ತು ಪ್ರಸ್ತುತದಲ್ಲಿ ವಿದ್ಯಾರ್ಥಿಗಳ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಹಲವರು ಅನಿಸಿಕೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬೃಹನ್ಮಠ ಪ್ರೌಢಶಾಲೆಯಲ್ಲಿ ಹಲವಾರು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಮತ್ತು ಕರ್ತವ್ಯದಲ್ಲಿ ಇರುವ ಹಿರಿಯರಾದ ಕೆ.ಸಿ.ಮಂಜಪ್ಪ,, ಎಂ.ಸಿ.ಮುರುಗೇಂದ್ರಯ್ಯ,ಶ್ರೀಮತಿ ಪ್ರಸಿದ್ಧಗಂಗಮ್ಮ,ಕೆ .ಸೌಭಾಗ್ಯವತಿ,. ಜಿ.ಎಂ.ಚಿದಾನಂದಯ್ಯ,ಕೆ.ಶರಣಪ್ಪ ಅವರುಗಳು ಬೋಧಕರು, ಶ್ರೀಮತಿ ಜಯಮ್ಮ ಬೋಧಕೇತರ ಸಿಬ್ಬಂದಿ. ಬಸವರಾಜಗಡ್ಡೆಪ್ಪ ಅವರು ಪ್ರಸ್ತುತ ಕರ್ತವ್ಯದಲ್ಲಿದ್ದಾರೆ.ಇವರೆಲ್ಲರಿಗೂ ಗುರುವಂದನೆ ಸಲ್ಲಿಸಿದರು. ನಿಧನ ಹೊಂದಿದವರಿಗೆ ಸಂತಾಪ ಸೂಚಿಸಲಾಯಿತು.
ಗೌರವ ವಂದನೆ ಸ್ವೀಕರಿಸಿ ಮಾತಾನಾಡಿದ ಕೆ.ಸೌಭಾಗ್ಯವತಿ ಅವರು ಜೀವನದಲ್ಲಿ ಶಿಕ್ಷಣ ಪಡೆದರೆ ಸ್ವಾಭಿಮಾನಪೂರ್ಣ ಬದುಕು ನಿರ್ವಹಿಸಬಹುದು.ಶಿಕ್ಷಕ ವೃತ್ತಿ ಪವಿತ್ರ ಎನ್ನುವುದಕ್ಕೆ ಈ ಸಭಯೇ ಸಾಕ್ಷಿಯಾಗಿದೆ ಎಂದರು.
ಮತ್ತೋರ್ವ ಕೆ.ಸಿ.ಮಂಜಪ್ಪ ಅವರು ನಾವು ನೀವು ಒಂದು ವೇದಿಕೆಯಲ್ಲಿ ಇಷ್ಟರ ಮಟ್ಟಿಗೆ ಸೇರಿ ಬದುಕು ಕಟ್ಟಿಕೊಳ್ಳಲು ಉತ್ತಮ ಜೀವನ ಸಾಗಿಸಲು ಅನುವು ಮಾಡಿಕೊಟ್ಟ ಮಲ್ಲಿಕಾರ್ಜುನಶ್ರೀಗಳು ಸ್ಥಾಪಿಸಿದ ಎಸ್ ಜೆ ಎಂ ವಿದ್ಯಾಪೀಠಕ್ಕೆ ಕೃತಜ್ಞತಾಪೂರ್ವಕವಾಗಿ ಗೌರವ ಸಲ್ಲಿಸುವ ಮೂಲಕ ಋಣ ಸಂದಾಯ ಮಾಡಬೇಕೆಂದು ಹೇಳಿದರು.
ಈ ಕಾರ್ಯ ಮಾದರಿ ಹಾಗೆ ಶಿಕ್ಷಣ ವಂಚಿತರಾಗುತ್ತಿರುವವರಿಗೆ ಶಿಕ್ಷಣ ದೊರಕುವಂತಾಗಬೇಕೆಂದು ಎಂ.ಸಿ.ಮುರುಗೇಂದ್ರಯ್ಯ ಅವರು ಅಭಿಪ್ರಾಯಪಟ್ಟರು. ಸ್ನೇಹಿತರು ಸಮ್ಮಿಲನ ಆಗುವುದರ ಜತೆಗೆ ನಿವೃತ್ತಿ ಹೊಂದಿದ ನಮ್ಮನ್ನು ಒಟ್ಟಿಗೆ ಸೇರಿಸಿದ ನಿಮ್ಮ ಪ್ರೀತಿಗೆ ಧನ್ಯವಾದಗಳು ಎಂದು ಶ್ರೀಮತಿ ಪ್ರಸಿದ್ಧಗಂಗಮ್ಮ ಭಾವುಕರಾದರು.
ರೇಣುಕಾ ಸಂಗಡಿಗರಿಂದ ಪ್ರಾರ್ಥನೆ ನಡೆಯಿತು. ಬಸವರಾಜಯ್ಯ ಸ್ವಾಗತಿಸಿದರು.ಸಂಘಟಕರಲ್ಲೊಬ್ಬರಾದ ಎಂ.ಜಿ.ಕೊಟ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಂಗಾಧರ ನಿರೂಪಣೆ ಮಾಡಿದರು.