‘ಬ್ರಹ್ಮಗಂಟು’ ಧಾರಾವಾಹಿಯ ಗುಂಡಮ್ಮ ಅಂದ್ರೆ ಎಲ್ಲರಿಗೂ ಇಷ್ಟ. ಆ ಧಾರಾವಾಹಿ ಮುಗಿದ ಮೇಲೆ ಗುಂಡಮ್ಮನನ್ನು ಮಿಸ್ ಮಾಡಿಕೊಂಡವರೆ ಹೆಚ್ಚು. ಬಳಿಕ ಗೀತಾ ಭಾರತೀ ಭಟ್ ಅಭಿಮಾನಿಗಳಿಗಾಗಿ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಸಂಪರ್ಕಕ್ಕೆ ಸಿಗುತ್ತಿದ್ದರು. ಫಿಟ್ನೆಸ್ ಕಡೆಗೆ ಹೆಚ್ಚು ಗಮನ ಕೊಟ್ಟಿದ್ದರು. ಇದೀಗ ಅವರದ್ದೇ ‘ರವಿಕೆ ಪ್ರಸಂಗ’ ರಿಲೀಸ್ ಗೆ ರೆಡಿಯಾಗಿದ್ದು, ಪ್ರಮೋಷನ್ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ಅಷ್ಟೇ ಅಲ್ಲ ರವಿಕೆಯ ಪ್ರಸಂಗವೂ ಅತ್ಯಂತ ಕುತೂಹಲಕಾರಿಯಾಗಿದೆ. `ರವಿಕೆ ಪ್ರಸಂಗ’ ಇದೇ ಫೆಬ್ರವರಿ 16ರಂದು ರಾಜ್ಯಾದ್ಯಂತ ತೆರೆಗಾಣಲಿದೆ.
ಸಂತೋಷ್ ಕೊಡಂಕೇರಿ ನಿರ್ದೇಶನದ ರವಿಕೆ ಪ್ರಸಂಗ ಸಿನಿಮಾವನ್ನು ರಾಜ್ಯಾದ್ಯಂತ ಸುತ್ತಾಡಿ, ಪ್ರಚಾರ ನಡೆಸುತ್ತಿದ್ದಾರೆ. ವಿಶೇಷವೆಂದರೆ, ಚಿತ್ರತಂಡ ಕ್ರಿಯಾಶೀಲ ಹಾದಿಯಲ್ಲಿ, ಹಲವಾರು ಹೊಸತನಗಳೊಂದಿಗೆ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ. ಜನರ ನಡುವೆ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ಇದೀಗ ಉಡುಪಿಯ ಪ್ರಸಿದ್ಧ ಜಯಲಕ್ಷ್ಮಿ ಸಿಲ್ಕ್ಸ್ ಮಳಿಗೆಯಲ್ಲಿ ಮೀಟ್ ಆಂಡ್ ಗ್ರೀಟ್ ಕಾನ್ಸೆಪ್ಟಿನಲ್ಲೊಂದು ಚೆಂದದ ಪ್ರಚಾರ ಕಾರ್ಯ ನೆರವೇರಿದೆ.
ಉಡುಪಿಯ ಜಯಲಕ್ಷ್ಮಿ ಸಿಲ್ಕ್ಸ್ ಮಳಿಗೆಯಲ್ಲಿ ರವಿಕೆ ಪ್ರಸಂಗದ ಪ್ರಚಾರದ ನೆಪದಲ್ಲೊಂದು ಹಬ್ಬವೇ ನಡೆದು ಹೋಗಿದೆ. ಈ ಮಳಿಗೆಯ ಸರಿಸುಮಾರು ಒಂಬೈನೂರಕ್ಕೂ ಹೆಚ್ಚು ಸಿಬ್ಬಂದಿಗಳ ಸಮ್ಮುಖದಲ್ಲಿ ಈ ಪ್ರಚಾರ ಕಾರ್ಯ ಯಶಸ್ವಿಯಾಗಿ ನಡೆದಿದೆ. ನಾಯಕಿ ಗೀತಾ ಭಾರತೀ ಭಟ್ ಅವರೆಲ್ಲರೊಂದಿಗೆ ಉತ್ಸಾಹದಿಂದ ಬೆರೆತು, ರವಿಕೆ ಪ್ರಸಂಗದ ಬಗ್ಗೆ ಮನಮುಟ್ಟುವಂತೆ ವಿವರಿಸಿದರು. ಸಿಬ್ಬಂದಿ ಕೂಡಾ ಖುಷಿಯಿಂದಲೇ ಗೀತಾ ಮತ್ತು ಚಿತ್ರತಂಡದ ಜೊತೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
ಇದೆಲ್ಲವೂ ಸಾಧ್ಯವಾದದ್ದು ಈ ಮಳಿಗೆಯ ಮಾಲೀಕರಾದ ವೀರೇಂದ್ರ ಹೆಗ್ಡೆ ಅವರ ಸಿನಿಮಾ ಪ್ರೀತಿಯಿಂದಾಗಿ. ಅವರು ಅತ್ಯಂತ ಆಪ್ತವಾಗಿ ಸಿನಿಮಾ ತಂಡದ ಜೊತೆ ತಮ್ಮ ಸಿಬ್ಬಂದಿಗಳ ಬೆರೆತು ಖುಷಿಪಡಲು ಅನುವು ಮಾಡಿ ಕೊಟ್ಟಿದ್ದರು. ನಂತರ ರಘು ಪಾಂಡೇಶ್ವರ ಕೂಡಾ ನೆರೆದಿದ್ದವರನ್ನೆಲ್ಲ ನಕ್ಕುನಲಿಸಿ ಭರ್ಜರಿ ಮನೋರಂಜೆ ನೀಡಿದರು. ಇದೇ ಸಂಭ್ರಮದ ನಡುವೆ ಜಯಲಕ್ಷ್ಮಿ ಸಿಲ್ಕ್ಸ್ ಮಾಲೀಕರಾದ ವೀರೇಂದ್ರ ಹೆಗ್ಡೆ ರವಿಕೆ ಪ್ರಸಂಗಕ್ಕೆ ಬೆಂಬಲ ಘೋಶಿಸಿದರು. ತಮ್ಮ ಸಿಬ್ಬಂದಿಯ ಸಮೇತ ಚಿತ್ರವನ್ನು ವೀಕ್ಷಿಸುವುದಾಗಿ ಭರವಸೆ ನೀಡಿದರು.
ಈ ಮೀಟ್ & ಗ್ರೀಟ್ ಪರಿಕಲ್ಪನೆಯ ಪ್ರಚಾರ ಕಾರ್ಯದಲ್ಲಿ ಗೀತಾ ಭಾರತಿ ಭಟ್, ನಿರ್ದೇಶಕ ಸಂತೋಷ್ ಕೊಡಂಕೇರಿ, ಕಥೆಗಾರ್ತಿ, ಸಂಭಾಷಣಾಗಾರ್ತಿ ಪಾವನಾ ಸಂತೋಷ್, ರಕ್ಷಕ್, ಕಲ್ಯಾಣ್ ಸೇರಿದಂತೆ ಚಿತ್ರತಂಡ ಹಾಜರಿತ್ತು. ಈಗಾಗಲೇ ಕನರ್ಬಾಟಕದ ನಾನಾ ಭಾಗಗಳಲ್ಲಿ ವಿಭಿನ್ನ ಪರಿಕಲ್ಪನೆಯ ಮೂಲಕ ಚಿತ್ರತಂಡ ರವಿಕೆ ಪ್ರಸಂಗದ ಪ್ರಚಾರ ನಡೆಸಿದೆ. ಮೈಸೂರು, ಕೊಡಗು, ದಕ್ಷಿಣಕನ್ನಡವೂ ಸೇರಿದಂತೆ ನಾನಾ ಭಾಗಗಳಲ್ಲಿ ಈಗಾಗಲೇ ರವಿಕೆ ಪ್ರಸಂಗದ ಪ್ರಭೆ ಪಸರಿಸಿಕೊಂಡಿದೆ.