ಬೆಂಗಳೂರು: ವರ್ತೂರು ಪ್ರಕಾಶ್ ಹೆಸರೇಳಿಕೊಂಡು ವಂಚಿಸಿದ್ದ ಆಪ್ತೆ ಶ್ವೇತಾ ಗೌಡ ಬಂಧನವಾಗಿದೆ. ಈ ಸಂಬಂಧ ಇಂದು ವರ್ತೂರು ಪ್ರಕಾಶ್ ಕೂಡ ವಿಚಾರಣೆಗೆ ಹಾಜರಾಗಿದ್ದಾರೆ. ಈ ಕೇಸ್ ಸಂಬಂಧ ವಿಚಾರಣೆಗೆ ಬರುವಂತೆ ಪುಲಿಕೇಶಿ ನಗರ ಪೊಲೀಸರು ಮೂರು ಬಾರಿ ನೋಟೀಸ್ ನೀಡಿದ್ದರು. ಆ ಸಂಬಂಧ ಇಂದು ಪೊಲೀಸರ ಮುಂದೆ ಹಾಜರಾಗಿದ್ದಾರೆ. ಫೇಸ್ಬುಕ್ ನಿಂದ ಪರಿಚಯವಾಗಿದ್ದ ಮಹಿಳೆಯಿಂದಾಗಿ ಈಗ ಮಾಜಿ ಸಚಿವರಿಗೂ ಕಂಟಕ ಎದುರಾಗಿದೆ.
ವರ್ತೂರು ಪ್ರಕಾಶ್ ಅವರಿಗೆ ಶ್ವೇತಾ, ಫೇಸ್ಬುಕ್ ಮೂಲಕ ಪರಿಚಯವಾಗಿದ್ದರು. ಬಳಿಕ ನಂಬರ್ ಪಡೆದು ಇಬ್ಬರು ಮಾತುಕತೆ ಶುರು ಮಾಡಿದ್ದರು. ವಾಟ್ಸಾಪ್ ಚಾಟಿಂಗ್ ಕೂಡ ಇತ್ತು. ವರ್ತೂರು ಪ್ರಕಾಶ್ ಅವರ ಹೆಸರನ್ನ ಶ್ವೇತಾ ತನ್ನ ಫೋನ್ ನಲ್ಲಿ ಗುಲಾಬ್ ಜಾಮೂನು ಎಂದು ಸೇವ್ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ನಲ್ಲಿದ್ದ ಆಭರಣ ಮಳಿಗೆಯೊಂದನ್ನು ಶ್ವೇತಾ ಅವರಿಗೆ ವರ್ತೂರು ಪ್ರಕಾಶ್ ಅವರೇ ಪರಿಚಯ ಮಾಡಿಕೊಟ್ಟಿದ್ದರು. ಇಬ್ಬರು ಜೊತೆಗೂಡಿಯೇ ಚಿನ್ನದ ವ್ಯವಹಾರ ನಡೆಸಿದ್ದರು. ಕೋಟ್ಯಾಂತರ ರೂಪಾಯಿ ವಂಚನೆ ನಡೆದಿದ್ದು, ನಾವೀಬ್ಬರು ಭಾಗಿ ಎಂದು ಪೊಲೀಸರ ಎದುರು ಶ್ವೇತಾ ಹೇಳಿದ್ದಾರೆ. ಇದಕ್ಕೆ ಪೂರಕವಾಗಿ ಶ್ವೇತಾ ಹಾಗೂ ವರ್ತೂರು ಪ್ರಕಾಶ್ ಅವರಿಬ್ಬರು ಜ್ಯುವೆಲ್ಲರಿ ಶಾಪ್ ಗೆ ಭೇಟಿ ನೀಡಿದ ಫೋಟೋಗಳು ಲಭ್ಯವಾಗಿವೆ.
ಹೀಗಾಗಿ ಈ ಪ್ರಕರಣದಲ್ಲಿ ಪೊಲೀಸರು ವರ್ತೂರು ಪ್ರಕಾಶ್ ಅವರನ್ನು ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ. ಶ್ವೇತಾ ಕೇವಲ ವರ್ತೂರು ಪ್ರಕಾಶ್ ಜೊತೆ ಮಾತ್ರವಲ್ಲ ಮಗ ನಿತಿನ್ ಜೊತೆಯೂ ಸಂಪರ್ಕದಲ್ಲಿದ್ದು, ನಿತಿನ್ ಪಾತ್ರದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.