ಚಿತ್ರದುರ್ಗ, (ಸೆ.30) : ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ದಸರಾವನ್ನು ಮನೆಗಳಲ್ಲೇ ಸರಳವಾಗಿ ಆಚರಿಸಿ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ನಾಡಹಬ್ಬ ದಸರಾ ಹಬ್ಬಕ್ಕೆ ಸಂಬಂಧಿಸಿದಂತೆ ಸರ್ಕಾರವು ಈಗಾಗಲೇ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅ.7 ರಿಂದ 15 ರವರೆಗೆ ನಾಡಹಬ್ಬ ದಸರಾ ಹಬ್ಬ ಆಚರಣೆ ಮಾಡಲಾಗುತ್ತಿದೆ ಎಂದರು.
ಕೋವಿಡ್-19ರ ವೈರಾಣು ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ನಾಡಹಬ್ಬ ದಸರಾವನ್ನು ಅತ್ಯಂತ ಸರಳ ಮತ್ತು ಭಕ್ತಿಪೂರ್ವಕವಾಗಿ ತಮ್ಮ ಮನೆಗಳಲ್ಲಿ ಆಚರಿಸಬೇಕು. ಹಬ್ಬದ ಸಂದರ್ಭದಲ್ಲಿ ಒಮ್ಮೆಲೇ 400 ಜನರಿಗಿಂತ ಹೆಚ್ಚು ಜನ ಸೇರುವಂತಿಲ್ಲ. ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸ್ ಸೇರಿದಂತೆ ಮುಂತಾದ ಸರ್ಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು. ಕೋವಿಡ್-19ರ ನಿಯಮ ಪಾಲನೆ ಮಾಡದ ಸಾರ್ವಜನಿಕ ಕಾರ್ಯಕ್ರಮಗಳನ್ನು ನಿಷೇಧಿಸಲಾಗುವುದು ಎಂದು ಹೇಳಿದರು.
ರಾಷ್ಟ್ರೀಯ ಹಾಗೂ ರಾಜ್ಯ ಸರ್ಕಾರ ಹೊರಡಿಸಿದ ನಿರ್ದೇಶನಗಳನ್ನು ತಪ್ಪದೇ ಕಟ್ಟುನಿಟ್ಟಾಗಿ ಪಾಲಿಸಬೇಕು. ದಸರಾ ಹಬ್ಬ ಆಚರಣೆಯನ್ನು ಶಾಂತಿ, ಸೌಹಾರ್ದತೆ ಮತ್ತು ಸಾಮರಸ್ಯದಿಂದ ಆಚರಿಸಬೇಕು ಎಂದರು.
ಕೋವಿಡ್ ಲಸಿಕೆ ಪಡೆಯಲು ಮನವಿ: ಜಿಲ್ಲೆಯ ನಾಗರಿಕರು ಯಾವುದೇ ಭಯ, ಆತಂಕಕ್ಕೆ ಒಳಗಾಗದೇ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದರು.
ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕದೇ ಸಾರ್ವಜನಿಕರು ಕಡ್ಡಾಯವಾಗಿ ಲಸಿಕೆ ಪಡೆಯಬೇಕು ಎಂದು ಹೇಳಿದರು.
ಎಸ್ಪಿ ಜಿ.ರಾಧಿಕಾ ಹಾಜರಿದ್ದರು.