ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಚಿತ್ರದುರ್ಗದಲ್ಲಿ ಆತಿಥಿ ಉಪನ್ಯಾಸಕರ ಪ್ರತಿಭಟನೆ

2 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ನ. 23 : ಆತಿಥಿ ಉಪನ್ಯಾಸಕರ ಸೇವಾ ಖಾಯಂಗೆ ಆಗ್ರಹಿಸಿ ತರಗತಿ ಬಹಿಷ್ಕರಿಸಿ ಅನಿರ್ಧಿಷ್ಟ ಅವಧಿ ಪ್ರತಿಭಟನೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಇಂದಿನಿಂದ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ಪ್ರಾರಂಭ ಮಾಡಿದ್ದಾರೆ.

ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಇಂದು ಬಹುತೇಕ ಅತಿಥಿ ಉಪನ್ಯಾಸಕರ ಸೇವೆಯನ್ನು ಅವಲಂಬಿಸಿದ್ದು, 15-20 ವರ್ಷಗಳಿಂದ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರ ಬದುಕು ಇಂದು ಅತಂತ್ರವಾಗಿದೆ. ಅತಿಥಿ ಎಂಬ ಅನಿಷ್ಟ ಪದ್ಧತಿಯನ್ನು ಮುಕ್ತಾಯಮಾಡಿ ಸೇವಾ ಖಾಯಂ ನೀಡಬೇಕು. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು, ಉಪಮುಖ್ಯಮಂತ್ರಿಗಳಾದ  ಡಿ.ಕೆ.ಶಿವಕುಮಾರರವರು ವಿರೋಧ ಪಕ್ಷದಲ್ಲಿದ್ದಾಗ ಬೆಳಗಾವಿ ಅಧಿವೇಶನದಲ್ಲಿ ನಮ್ಮ ಸಮಸ್ಯೆಗಳನ್ನು ಕುರಿತು ಸದನದಲ್ಲಿ ಚರ್ಚಿಸಿ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದರು.

ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಅತಿಥಿ ಉಪನ್ಯಾಸಕರ ಬೇಡಿಕೆಗಳಿಗೆ ಶಾಶ್ವತ ಪರಿಹಾರವನ್ನು ಒದಗಿಸಿ ಅವರನ್ನು ಖಾಯಂಗೊಳಿಸುತ್ತೇವೆ ಎಂದು ಸದನದಲ್ಲಿ ಹೇಳಿಕೆ ನೀಡಿದ್ದರು. ಅದರಂತೆ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸುವ ಅಂಶವನ್ನು ಪ್ರಸ್ತಾಪಿಸಿದ್ದಾರೆ. ಹಾಗಾಗಿ ಅತಿಥಿ ಉಪನ್ಯಾಸಕರ ಬಹುಕಾಲದ ಬೇಡಿಕೆಯಾದ ಸೇವಾ ಖಾಯಂ ವಿಷಯವನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ನಮಗೆ ಸೂಕ್ತ ಪರಿಹಾರವನ್ನು ಒದಗಿಸಲು ಒತ್ತಾಯಿಸಲಾಯಿತು.

ಈಗಾಗಲೇ ಪಶ್ಚಿಮ ಬಂಗಾಳ, ಪಂಜಾಬ್, ಹರಿಯಾಣ, ದೆಹಲಿ, ಆಂಧ್ರಪ್ರದೇಶ, ತೆಲಂಗಾಣ ಮುಂತಾದ ರಾಜ್ಯಗಳಲ್ಲಿ ಅತಿಥಿ/ ಅರೆಕಾಲಿಕ/ಗುತ್ತಿಗೆ ಆಧಾರಿತ ಉಪನ್ಯಾಸಕರನ್ನು ಖಾಯಂಗೊಳಿಸಿದ ಉದಾಹರಣೆಗಳಿವೆ. ಹಾಗಾಗಿ ಪ್ರಸ್ತುತ 2023-24ನೇ ಶೈಕ್ಷಣಿಕ ವರ್ಷದಿಂದಲೇ ನಮಗೆ ಸೇವಾ ಖಾಯಂ ನೀಡಬೇಕೆಂದು ಈ ಮೂಲಕ ಸರ್ಕಾರಕ್ಕೆ ಆಗ್ರಹಿಸಲಾಯಿತು.

ನಮ್ಮ ಕೆಲಸಕ್ಕೆ ಕಾಲೇಜಿನಲ್ಲಾಗಲಿ, ಸರ್ಕಾರದ ಮಟ್ಟದಲ್ಲಾಗಲೀ, ವಿಶ್ವ ವಿದ್ಯಾಲಯಗಳಲ್ಲಿ ಸರಿಯಾದ ರೀತಿಯಲ್ಲಿ ಮನ್ನಣೆ ಸಿಗುತ್ತಿಲ್ಲ ಇದ್ದಲ್ಲದೆ ಸರಿಯಾದ ರೀತಿಯಲ್ಲಿಯೂ ಸಹಾ ವೇತನ ಪಾವತಿಯಗುತ್ತಿಲ್ಲ, ಇಲ್ಲಿ 1 ವರ್ಷದಿಂದ ಹಿಡಿದು 26 ವರ್ಷದವರೆಗೂ ಕೆಲಸ ಮಾಡಿದವರಿದ್ಧಾರೆ ಇವರಿಗೆ ಯಾವುದೇ ಸೇವಾ ಭದ್ರತೆ ಇಲ್ಲವಾಗಿದೆ. ಇಂದಿನಿಂದ ನಮ್ಮ ಪಾಠವನ್ನು ಬಹಿಷ್ಕಾರ ಮಾಡಿ ಅನಿರ್ಧಿಷ್ಟ ಅವಧಿಯ ಪ್ರತಿಭಟನೆಯನ್ನು ಪ್ರಾರಂಭ ಮಾಡಲಾಗಿದೆ ಚಿತ್ರದುರ್ಗ ಜಿಲ್ಲೆಯಲ್ಲಿ ದಾವಣೆಗೆರೆ ವಿವಿದ 14 ಕಾಲೇಜುಗಳಲ್ಲಿ ಸುಮಾರು 1000 ಜನ  ಆತಿಥಿ ಉಪನ್ಯಾಸಕರು ಕೆಲಸವನ್ನು ಮಾಡುತ್ತಿದ್ದಾರೆ. ಬೆಳಗಾವಿಯ ಚಳಿಗಾಲದ ಆಧಿವೇಶನದಲ್ಲಿ ಇದರ ಬಗ್ಗೆ ಚರ್ಚೆ ಮಾಡಿ ನಮ್ಮನ್ನು ಖಾಯಂ ಮಾಡದಿದ್ದರೆ ನಮ್ಮ ಮುಂದಿನ ಹೋರಾಟವನ್ನು ರೂಪಿಸಲಾಗುವುದೆಂದು ಕಾರ್ಯದರ್ಶಿ ಮಂಜುನಾಥ್ ತಿಳಿಸಿದ್ದಾರೆ.

ಈ ಪ್ರತಿಭಟನೆಯ ನೇತೃತ್ವವನ್ನು ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರಾದ ಡಾ.ಯಶೋಧರ ವಹಿಸಿದ್ದರು. ಇದರಲ್ಲಿ ಸಂಘದ ಪದಾಧಿಕಾರಿಗಳಾದ ಡಾ.ಜಗದೀಶ್ ಕೆರೆನಳ್ಳಿ, ಚಂದನ, ಡಾ.ಗುರುಸ್ವಾಮಿ, ಪರಮೇಶ್, ಡಾ.ಪಾಪಯ್ಯ, ಶಿವಪ್ರಸಾದ್, ಸುವರ್ಣಮ್ಮ, ಮಂಜಪ್ಪ, ಡಾ.ರಂಗಸ್ವಾಮಿ, ಡಾ.ಸಂತೋಷ ಕುಮಾರ್ ಮಂಜುಳಾ ಚಿತ್ತಯ್ಯ ಸೇರಿದಂತೆ ಇತರರು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *