ತುಮಕೂರು: ಗುಬ್ಬಿ ಶಾಸಕ ಶ್ರೀನಿವಾಸ್ ಅವರನ್ನು ಜೆಡಿಎಸ್ ಪಕ್ಷ ಅಧಿಕೃತವಾಗಿ ಉಚ್ಛಾಟನೆ ಮಾಡಿದೆ. ಈ ಸಂಬಂಧ ಮಾತನಾಡಿರುವ ಗುಬ್ಬಿ ಶ್ರೀನಿವಾಸ್, ಮಾಡುತ್ತಾರೆ ಎಂಬುದು ನನಗೆ ಮೊದಲೇ ಗೊತ್ತಿತ್ತು. ಅದರಲ್ಲಿ ಹೊಸ ವಿಚಾರವೇನು ಇಲ್ಲ. ಮಾಡಿದ್ದು ಸಂತೋಷ ತರಿಸುವಂಥದ್ದೆ ಎಂದಿದ್ದಾರೆ.
ಇದನ್ನು ನಾನು ಸನ್ಮಾನ ಅಂತಾನು ಅಂದುಕೊಳ್ಳಲ್ಲ, ಅವಮಾನ ಅಂತಾನು ಅಂದುಕೊಳ್ಳಲ್ಲ, ಮುಜುಗರ ಅಂತಾನು ಎಂದುಕೊಳ್ಳಲ್ಲ. ಯಾಕೆಂದರೆ ಒಂದು ವರ್ಷದಿಂದಲೇ ಈ ವಿಚಾರ ಗೊತ್ತಿತ್ತು. ಅಂದು ಅಭ್ಯರ್ಥಿ ಅನೌನ್ಸ್ ಮಾಡಿದಾಗಲೇ ನಮಗೆ ತಿಳಿದಿತ್ತು. ಅವರಿಗೆ ನಾನು ಬೇಡವಾಗಿದ್ದೆ ಎಂಬುದು ಗೊತ್ತಾಗಿತ್ತು. ಅಭ್ಯರ್ಥಿಯನ್ನು ಅನೌನ್ಸ್ ಮಾಡಿದಾಗಲೇ ನನ್ನ ದಾರಿ ನಾನು ನೋಡಿಕೊಳ್ಳಬೇಕಿತ್ತು. ಅದರಲ್ಲಿ ಹೊಸದೇನು ಇಲ್ಲ.
ಅವರೇ ಹಾಕಿಬಿಟ್ಟಿದ್ದಾರೆ. ಒಂದು ವರ್ಷದಿಂದ ನಾನು ಹೊರಗಿದ್ದೇನೆ ಎಂಬುದು ಅವರಿಗೂ ಗೊತ್ತಿತ್ತು, ನನಗೂ ಗೊತ್ತಿತ್ತು. ಮುಂದಿನ ನಡೆ ಡಿಸೆಂಬರ್ ನಲ್ಲಿ ನಿರ್ಧರಿಸುತ್ತೇನೆ. ಸದ್ಯಕ್ಕೆ ಈ ಪಕ್ಷದಲ್ಲಿ ಗೆದ್ದಿದ್ದೇನೆ. ಅದಕ್ಕೆ ರಾಜೀನಾಮೆ ಕೊಡಬೇಕು, ಕೊಡುತ್ತೇನೆ. ಡಿಸೆಂಬರ್ ಕಳೆದ ಬಳಿಕ ರಾಜೀನಾಮೆ ಕೊಡುತ್ತೇನೆ. ಕೊಟ್ಟ ಬಳಿಕ ಕಾರ್ಯಕರ್ತರ ಜೊತೆ ಮಾತನಾಡಿ, ಆಮೇಲೆ ತೀರ್ಮಾನಿಸುತ್ತೇನೆ. ರಾಜ್ಯಪಾಲರರ ಬಳಿ ವಜಾ ಮಾಡಿ ಅಂತ ಹೋದರೆ ಹೋಗಲಿ. ಈ ಹಿಂದೆಲ್ಲಾ ಅಡ್ಡಮತದಾನ ಮಾಡಿದಾಗಲೂ ಹೋಗಿದ್ದರು. ಏನಾಯಿತು…? ನೋಡೋಣಾ ಮುಂದೆ ಏನಾಗುತ್ತೆ ಎಂದಿದ್ದಾರೆ.