ಗೃಹಲಕ್ಷ್ಮೀ ಯೋಜನೆ :  ಚಿತ್ರದುರ್ಗ ಜಿಲ್ಲೆಯಲ್ಲಿ ಶೇ.70 ರಷ್ಟು ಪ್ರಗತಿ : ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ.

3 Min Read

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ(ಕರ್ನಾಟಕ ವಾರ್ತೆ)ಜುಲೈ.31: ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆ ನೋಂದಣಿಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಅತ್ಯತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಪಡಿತರ ಚೀಟಿ ಹೊಂದಿದ ಶೇ.70 ರಷ್ಟು ಮನೆ ಓಡತಿಯರು ಯೋಜನೆ ಲಾಭ ಪಡೆಯಲು ಇದುವರೆಗೂ ಅರ್ಜಿ ಸಲ್ಲಿಸಿದ್ದಾರೆ. ಉಳಿದ ಅರ್ಜಿ ಸಲ್ಲಿಕೆಗಳ ಪ್ರಕ್ರಿಯೆ ಚುರುಕುಗೊಳಿಸಿ, ಮೂರನಾಲ್ಕು ದಿನಗಳಲ್ಲಿ ಪೂರ್ಣಗೊಸುವಂತೆ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಕುರಿತು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ತಾಲೂಕುಗಳ ತಹಶೀಲ್ದಾರು,  ತಾ.ಪಂ.ಇಓ, ನಗರ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಡಿಪಿಓಗಳ ಸಭೆ ನಡೆಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶಗಳಿಂತ, ನಗರ ಪ್ರದೇಶದಲ್ಲಿ ಹೆಚ್ಚಿನ ನೋಂದಣಿ ಪ್ರಮಾಣ ಕಂಡುಬಂದಿದೆ. ನೋಂದಣಿಗೆ ಅಡಚಣೆ ಉಂಟು ಮಾಡುವ ತಾಂತ್ರಿಕ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಲು ಎಲ್ಲಾ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕರ್ತವ್ಯ ನಿರ್ವಹಿಸಬೇಕು. ಪ್ರತಿ ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳು ದಿನ ಒಂದಕ್ಕೆ 100 ನೋಂದಣಿಗಳನ್ನು ಕಡ್ಡಾಯವಾಗಿ ಮಾಡಬೇಕು. ಮುಖ್ಯವಾಗಿ ಸಿಡಿಪಿಓಗಳು, ಗ್ರಾಮ, ವಾರ್ಡ್‍ವಾರು ಪಡಿತರ ಚೀಟಿ ಹೊಂದಿರುವವರ ಪಟ್ಟಿ ತಯಾರಿಸಿ, ನೋಂದಣಿ ಕೇಂದ್ರಗಳಿಗೆ ಕರೆ ತರಬೇಕು ಎಂದರು.

ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿ-ಆಧಾರ್ ಇ-ಕೆವೈಸಿ
ಬಹಳಷ್ಟು ಅರ್ಜಿಗಳು ಪಡಿತರ ಚೀಟಿಯೊಂದಿಗೆ ಆಧಾರ್ ಇ-ಕೆವೈಸಿ ಆಗಿರದ ಕಾರಣ ನೊಂದಣಿಯಾಗುತ್ತಿಲ್ಲ. ಪಡಿತರ ಚೀಟಿಯೊಂದಿಗೆ ಆಧಾರ್ ಇ-ಕೆವೈಸಿ ಮಾಡಲು ಸಂಬಂದ ಪಟ್ಟ ನ್ಯಾಯಬೆಲೆ ಅಂಗಡಿಗಳಲ್ಲಿ ಸೌಲಭ್ಯವಿದೆ. ಸಾರ್ವಜನಿಕರು ತಾಲೂಕು ಕೇಂದ್ರ ಅಥವಾ ತಾಲೂಕು ಕಚೇರಿಗಳಿಗೆ ಅಲೆದಾಡದೆ, ಸಂಬಂದ ಪಟ್ಟ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ, ಆಧಾರ್ ನಂಬರ್ ನೀಡುವುದರೊಂದಿಗೆ, ಬಯೋಮೆಟ್ರಿಕ್ ಮೂಲಕ ಇ-ಕೆವೈಸಿ ಮಾಡಿಸಿಕೊಳ್ಳವಂತೆ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ತಿಳಿಸಿದ್ದಾರೆ.

ಇನ್ನೂ ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರ ವಿವರದಲ್ಲಿ, ಪುರಷರ ಹೆಸರಿನಿಂದ ಮಹಿಳೆಯರ ಹೆಸರಿಗೆ ಬದಲಾಯಿಸಲು ಅವಕಾಶವಿದೆ. ಆಹಾರ ಶಿರಸ್ತೇದಾರ್ ಅವರಿಗೆ ಅರ್ಜಿ ಸಲ್ಲಿಸುವುದರ ಮೂಲಕ ಕುಟುಂಬದ ಮುಖ್ಯಸ್ಥರ ವಿವರವನ್ನು ಬದಲಾಯಿಸಿಕೊಳ್ಳಬಹುದು.

ಎಲ್ಲಾ ತಹಶೀಲ್ದಾರ್ ಕಚೇರಿಗಳಲ್ಲಿ ಆಧಾರ್ ಸೇವಾ ಕೇಂದ್ರಗಳಿವೆ. ಯಾರ ಆಧಾರ್ ಸಂಖ್ಯೆ ಮೊಬೈಲ್ ನಂಬರ್ ಜೋಡೆಣೆಯಾಗಿಲ್ಲವೋ ಅವರು ಕೂಡಲೇ ಮೊಬೈಲ್ ನಂಬರ್ ಜೋಡಣೆ ಮಾಡಿಸಬಹುದು.  ಜಿ.ಎಸ್.ಟಿ ಹಾಗೂ ಆದಾಯ ತೆರಿಗೆ ಸಲ್ಲಿಸದ ಇರುವ ಎಪಿಎಲ್ ಪಡಿತರ ಚೀಟಿ ಹೊಂದಿರುವವರು ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.

ನೋಂದಣಿ ಕುಂಠಿತ ಸಿಡಿಪಿಓಗಳೇ ಹೊಣೆ
ಗೃಹಲಕ್ಷ್ಮೀ ಯೋಜನೆ ನೋಂದಣಿ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಬರುವ ಗುರುವಾರ ಪ್ರಗತಿ ಪರಿಶೀಲನೆ ಸಭೆ ನಡೆಯಲಿದೆ. ಅದರ ಒಳಗಾಗಿ ನೋಂದಣಿ ಪ್ರಕ್ರಿಯೆ ಚುರುಕುಗೊಳ್ಳಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಈ ಕಾರ್ಯಕ್ಕೆ ಜಿಲ್ಲಾಡಳಿತ ಮತ್ತು ಜಿಲ್ಲಾಪಂಚಾಯಿತಿಗಳು ಕೈ ಜೋಡಿಸಿ ಸಹಕರಿಸುತ್ತಿವೆ. ಸಿಡಿಪಿಓಗಳು ನೋಂದಣಿ ಕುರಿತು ಹೆಚ್ಚಿನ ಜಾಗೃತಿ ವಹಿಸಬೇಕು.

ಪ್ರತಿ ವಾರ್ಡ್ ಹಾಗೂ ಗ್ರಾಮವಾರು ಮಾಹಿತಿಯನ್ನು ಪಡೆದುಕೊಳ್ಳಬೇಕು. ನೋಂದಣಿ ಮಾಡಿಸಲು ಜನರನ್ನು ಪ್ರೇರಿಪಿಸಬೇಕು. ನೋಂದಣಿ ಕುಂಠಿತ ಕಂಡುಬಂದರೆ ಸಂಬಂಧಪಟ್ಟ ಸಿಡಿಪಿಓಗಳನ್ನೇ ನೇರವಾಗಿ ಹೊಣೆ ಮಾಡಲಾಗುವುದು. ಅಂತಹವರ ವಿರುದ್ದ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು. ಪ್ರತಿ ನೋಂದಣಿ ಕೇಂದ್ರಗಳಲ್ಲಿ ಕನಿಷ್ಠ 100 ನೋಂದಣಿಯನ್ನು ಪ್ರತಿದಿನ ಮಾಡಲೇ ಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 3,90,204 ಪಡಿತರ ಚೀಟಿ ಹೊಂದಿರುವ ಕುಟುಂಬಗಳು ಇವೆ. ಇದರಲ್ಲಿ ಜುಲೈ 30ರ ಅಂತ್ಯಕ್ಕೆ 2,73,291 ಕುಟುಂಬದ ಒಡತಿಯರು ಗೃಹಲಕ್ಷ್ಮೀ ಯೋಜನೆ ಈಗಾಗಲೇ ನೊಂದಾಯಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಶೇ.70.4 ರಷ್ಟು ಪ್ರಗತಿ ಸಾಧಿಸಲಾಗಿದೆ.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ಆಹಾರ ಇಲಾಖೆ ಜಂಟಿ ನಿರ್ದೇಶಕ ಮಧುಸೂಧನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೆಶಕಿ ಭಾರತಿ.ಆರ್. ಬಣಕಾರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್, ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *