ಬೆಂಗಳೂರು.ಜುಲೈ.21 : ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯಡಿ ಮೇ ತಿಂಗಳವರೆಗಿನ ಬಾಕಿ ಕಂತಿನ ಹಣವನ್ನು ಈಗಾಗಲೇ ಅರ್ಹ ಮಹಿಳೆಯರ ಖಾತೆಗಳಿಗೆ ವರ್ಗಾಯಿಸಲಾಗಿದೆ. ಇದರ ಬೆನ್ನಲ್ಲೇ, ಯೋಜನೆಯಲ್ಲಾಗುತ್ತಿರುವ ದುರುಪಯೋಗಕ್ಕೆ ತಡೆ ಒಡ್ಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ದಿಟ್ಟ ಹೆಜ್ಜೆ ಇಡಲು ಮುಂದಾಗಿದೆ.
ಆದಾಯ ತೆರಿಗೆ ಪಾವತಿದಾರರು ಹಾಗೂ ಮೃತಪಟ್ಟವರ ಖಾತೆಗಳಿಗೂ ನಗದು ಜಮೆಯಾಗುತ್ತಿರುವ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, ಅನರ್ಹರನ್ನು ಪಟ್ಟಿಯಿಂದ ಕೈಬಿಡಲು ಸರ್ಕಾರ ತೀರ್ಮಾನಿಸಿದೆ. ಈ ನಿಟ್ಟಿನಲ್ಲಿ ಯೋಜನೆಯ ಎಲ್ಲಾ ಫಲಾನುಭವಿಗಳ ಮರು ನವೀಕರಣ (ರಿನ್ಯೂವಲ್) ಪ್ರಕ್ರಿಯೆ ಶೀಘ್ರದಲ್ಲೇ ಶುರುವಾಗುವ ಸಾಧ್ಯತೆಯಿದೆ.
ಫಲಾನುಭವಿಗಳ ನವೀಕರಣ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಇನ್ನೂ ಯಾವುದೇ ಅಧಿಕೃತ ಅಧಿಸೂಚನೆ ಹೊರಬಿದ್ದಿಲ್ಲ. ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚಿಸಿ, ಅಂತಿಮ ಒಪ್ಪಿಗೆ ದೊರೆತ ತಕ್ಷಣವೇ ಬಯೋಮೆಟ್ರಿಕ್ ಪರಿಶೀಲನೆ ಹಾಗೂ ಮರು ನೋಂದಣಿ ಕಾರ್ಯಕ್ಕೆ ಚಾಲನೆ ಸಿಗಲಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಈ ನವೀಕರಣ ಪ್ರಕ್ರಿಯೆಯಲ್ಲಿ ಅಂಗನವಾಡಿ ಸಿಬ್ಬಂದಿಯ ಪಾತ್ರ ಪ್ರಮುಖವಾಗಿರಲಿದೆ. ಕಾರ್ಯಕರ್ತೆಯರೇ ನೇರವಾಗಿ ಮನೆ-ಮನೆಗೆ ಭೇಟಿ ನೀಡಿ ಅಗತ್ಯ ವಿವರ ಹಾಗೂ ದಾಖಲೆಗಳನ್ನು ಕಲೆಹಾಕಲಿದ್ದಾರೆ. ಇದರ ಹೊರತಾಗಿ, ಸಾರ್ವಜನಿಕರ ಅನುಕೂಲಕ್ಕಾಗಿ ಬೆಂಗಳೂರು ಒನ್, ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳಲ್ಲೂ ಅವಕಾಶ ಕಲ್ಪಿಸಲಾಗುವುದು. ಫಲಾನುಭವಿಗಳು ತಮ್ಮ ಆಧಾರ್ ಕಾರ್ಡ್ ಹಾಗೂ ಪಡಿತರ ಚೀಟಿ (ರಾಷನ್ ಕಾರ್ಡ್) ನೀಡಿ ಮರು ನವೀಕರಣ ಮಾಡಿಕೊಳ್ಳಬಹುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.









