ಎರಡು ಡೋಸ್ ಪಡೆದವರಿಗೆ ಗ್ರೀನ್ ಪಾಸ್ ಅಥವಾ ಯೂನಿವರ್ಸಲ್ ಪಾಸ್ ಕೊಡುವ ಚಿಂತನೆ : ಸಚಿವ ಸುಧಾಕರ್

suddionenews
1 Min Read

ಬೆಂಗಳೂರು: ಕೊರೊನಾ ಸಂಭವನೀಯ ಮೂರನೇ ಅಲೆಯನ್ನು ಯಶಸ್ವಿಯಾಗಿ ಮತ್ತು ಪರಿಣಾಮಕಾರಿಯಾಗಿ ಎದುರಿಸಲು ಸರ್ಕಾರ ಎಲ್ಲಾ ತಯಾರಿ ಮಾಡಿಕೊಂಡಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಕೋವಿಡ್ ನಿಯಂತ್ರಣ ಮಾಡಲು ಅಧಿಕಾರಿಗಳಿಗೆ ಹಲವು ಜವಾಬ್ದಾರಿ ಕೊಟ್ಟಿದ್ದೇವೆ. ಎಲ್ಲಾ ಅಧಿಕಾರಿಗಳ ಸಮನ್ವಯ ಕುರಿತು ಸಭೆ ಮಾಡಲಾಗಿದೆ. ಕಳೆದ ಎರಡು ಅಲೆಗಳ ವೇಳೆ ಅನುಭವ ಪಡೆದ ಅಧಿಕಾರಿಗಳು ಈ ಬಾರಿ ಯಾವುದೇ ಲೋಪ ಆಗದಂತೆ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕೊರೊನಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ 99% ಮೊದಲ ಡೋಸ್ ಲಸಿಕೆ ನೀಡಲಾಗಿದೆ. ಎರಡನೇ ಡೋಸ್ ಪಡೆದವರ ಪ್ರಮಾಣ 80% ಇದೆ. ಜನವರಿ 10 ರಿಂದ 60 ವರ್ಷ ಮೇಲ್ಪಟ್ಟ ಅಗತ್ಯ ಇರುವವರಿಗೆ, ಫ್ರಂಟ್ ಲೈನ್ ವರ್ಕರ್ ಗಳಿಗೆ ಬೂಸ್ಟರ್ ಡೋಸ್ ನೀಡಲಾಗುವುದು. 15-18 ವರ್ಷಗಳ ಮಕ್ಕಳ ಲಸಿಕಾ ಕಾರ್ಯಕ್ರಮವೂ ವೇಗವಾಗಿ ನಡೆಯುತ್ತಿದೆ. ಭಾರತ 150 ಕೋಟಿ ಡೋಸ್ ಲಸಿಕೆ ನೀಡಿ ಮೈಲುಗಲ್ಲು ಸ್ಥಾಪಿಸಿದೆ. ಕೊರೊನಾ ವಿರುದ್ಧ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಹೇಗೆ ಕೆಲಸ ಮಾಡುತ್ತಿವೆ ಅನ್ನುವುದಕ್ಕೆ ಇದು ಉದಾಹರಣೆ ಎಂದರು.

ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ರೋಗ ಲಕ್ಷಣ ಇರುವವರನ್ನು ಮಾತ್ರ ಪರೀಕ್ಷೆ ಮಾಡಿದರೆ ಸಾಕು. ಆದರೆ ಕರ್ನಾಟಕ ಸರ್ಕಾರ ಕೊರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿರುವವರ ಪರೀಕ್ಷೆ ಕೂಡ ನಡೆಸಲಿದೆ. 2 ಡೋಸ್ ಲಸಿಕೆ ತೆಗೆದುಕೊಂಡವರಿಗೆ ಗ್ರೀನ್ ಪಾಸ್ ಅಥವಾ ಯೂನಿವರ್ಸಲ್ ಪಾಸ್ ಕೊಡುವ ಬಗ್ಗೆ ಚಿಂತನೆ ನಡೆಯುತ್ತಿದೆ.

ಪ್ರತಿದಿನ ಸಂಜೆ 5 ಗಂಟೆಗೆ ಆರೋಗ್ಯ ಇಲಾಖೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆಯಾಗಲಿದೆ. ಮನೆಯಲ್ಲಿ ಮೂರು ಪ್ರಕರಣ ಕಂಡು ಬಂದರೆ, ಮೈಕ್ರೋ ಕಂಟೈನ್ಮೆಂಟ್ ವಲಯ ಎಂದು ಘೋಷಣೆ ಮಾಡಲಾಗುವುದು.

Share This Article
Leave a Comment

Leave a Reply

Your email address will not be published. Required fields are marked *