ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಸ್ವಾಗತ, ಸಂಶಯಗಳಿಗೆ ಸ್ಪಷ್ಟನೆ ಅಗತ್ಯ : ಪಿ.ಕೋದಂಡರಾಮಯ್ಯ

2 Min Read

ಚಿತ್ರದುರ್ಗ : ಭದ್ರಾ ಮೇಲ್ದಂಡೆ ಯೋಜನೆ ಜಾರಿ ಹಿಂದಿನ ಹೋರಾಟಕ್ಕೆ ದೊಡ್ಡ ಇತಿಹಾಸ ಇದ್ದು, ಎರಡೂವರೆ ದಶಕದ ಹೋರಾಟಕ್ಕೆ ಜಿಲ್ಲೆಯ ಎಲ್ಲ ವರ್ಗದ ಜನರ ಬೆಂಬಲದ ಫಲ ಬಯಲುಸೀಮೆ ಪ್ರದೇಶಕ್ಕೆ ನೀರು ಹರಿಯುವ ಕಾಲ ಸನ್ನಿಹವಾಗಿದೆ. ಈ ಸಂದರ್ಭ ರಾಜ್ಯದ ನೀರಾವರಿ ಯೋಜನೆಗೆ ಮೊದಲ ಬಾರಿಗೆ ಕೇಂದ್ರ ಬಜೆಟ್‍ನಲ್ಲಿ 5300 ಕೋಟಿ ರೂ. ಅನುದಾನ ಘೋಷಣೆ ಮಾಡಿರುವುದು ಸ್ವಾಗತರ್ಹ ಆಗಿದೆ. ಈ ಕಾರಣಕ್ಕೆ ರಾಜ್ಯ, ಕೇಂದ್ರ ಸರ್ಕಾರಕ್ಕೆ ಅಭಿನಂದನೆಗಳು.

ಈ ಮಧ್ಯೆ ಕೆಲ ಸಂಶಯಗಳು ಜೀವಂತವಾಗಿದ್ದು, ಈ ಸಂಬಂಧ ಸ್ಪಷ್ಟೀಕರಣದ ಅಗತ್ಯವಿದೆ.

1) ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸುವ ಪ್ರಕ್ರಿಯೆಯನ್ನು ಕೇಂದ್ರ ಸಚಿವ ಸಂಪುಟದಲ್ಲಿ ಪೂರ್ಣಗೊಳಿಸಲಾಗಿದೆಯೇ.

2) ಕೇಂದ್ರ ಬಜೆಟ್‍ನಲ್ಲಿನ ಅನುದಾನ ಹಂಚಿಕೆಯನ್ನು ಬಳಕೆಗಾಗಿ ಬಿಡುಗಡೆ ಮಾಡಬಹುದೇ ಅಥವಾ 2023-24ಕ್ಕೆ ರಾಜ್ಯ ಸರ್ಕಾರ ತನ್ನ ಪಾಲಿನ ಶೇ.40 ಅನುದಾನಕ್ಕೆ ಹೊಂದಿಕೆಯಾಗಿ ಬಿಡುಗಡೆ ಮಾಡಲು ಕೇಂದ್ರ ಸರ್ಕಾರದ ಷರತ್ತಿಗೆ ಒಳಗಾಗಿದೆಯೇ?

3) ಸೂಕ್ಷ್ಮ ನೀರಾವರಿ, ಕೆರೆಗಳಿಗೆ ನೀರು ತುಂಬಿಸುವ, ಕುಡಿಯುವ ಯೋಜನೆ ಹೊರತುಪಡಿಸಿ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಗಳಿಗೆ ಕೇಂದ್ರ ಬಜೆಟ್ ಅನುದಾನವನ್ನು ಬಳಸಬಹುದೇ?

4) ಕೇಂದ್ರದ ಅನುದಾನ ಬಳಕೆ ಮಾಡಬೇಕಾದರೆ ರಾಜ್ಯ ಸರ್ಕಾರ ತನ್ನ ಪಾಲಿನ ಜವಾಬ್ದಾರಿಗೆ ವೇಗ ನೀಡಬೇಕಿದೆ. ತುಂಗಾ ತಿರುವು ಮತ್ತು ಮೇಲ್ಮಟ್ಟದ ಭದ್ರಾ ಯೋಜನೆ ಚಿತ್ರದುರ್ಗ ಮತ್ತು ತುಮಕೂರು ಶಾಖಾ ಕಾಲುವೆಗಳಿಗೆ ಏಕಕಾಲದಲ್ಲಿ ಆದ್ಯತೆ ನೀಡಬೇಕಾಗಿದೆ.

ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೆಚ್ಚು ಅನುದಾನ ಬಿಡುಗಡೆ ಮಾಡುವ ಮೂಲಕ ಕಾಮಗಾರಿ ಪೂರ್ಣಗೊಳಿಸುವ ತುರ್ತು ಇದೆ.
ಭದ್ರಾ ಮೇಲ್ದಂಡೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕು ಎಂಬುದು ಮುಖ್ಯವಾಗಿ ಹೋರಾಟ ಸಮಿತಿ ಒತ್ತಾಯ ಆಗಿದೆ. ಆದರೆ, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಬಜೆಟ್‍ನಲ್ಲಿ ಸ್ಪಷ್ಟತೆ ದೊರೆತಿಲ್ಲ. ಆದ್ದರಿಂದ ರಾಜ್ಯ ಸರ್ಕಾರ, ಕೇಂದ್ರದ ಮೇಲೆ ಒತ್ತಡ ತಂದು ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸುವಂತೆ ಮಾಡಬೇಕಾಗಿದೆ ಎಂದು ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಪಿ.ಕೋದಂಡರಾಮಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಿ.ಕೋದಂಡರಾಮಯ್ಯ
ಅಧ್ಯಕ್ಷರು,
ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ
ಮಾಜಿ ಸಂಸದರು, ಚಿತ್ರದುರ್ಗ
ಮೊ.ನಂ: 9448045295

Share This Article
Leave a Comment

Leave a Reply

Your email address will not be published. Required fields are marked *