ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಅದ್ಧೂರಿ ರಾಜ್ಯೋತ್ಸವಕ್ಕೆ ಸರ್ಕಾರ ತಕ್ಷಣವೇ ಅನುಮತಿ ನೀಡಬೇಕು. ಒಂದು ವೇಳೆ ಸರ್ಕಾರ ಅನುಮತಿ ನೀಡದಿದ್ದರೂ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸುತ್ತೇವೆ ಎಂದು ಕನ್ನಡಪರ ಹೋರಾಟಗಾರ ಅಶೋಕ್ ಚಂದರಗಿ ಹೇಳಿದ್ದಾರೆ.
ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿಸದ ಅವರು, ಬೆಳಗಾವಿಯ ಸಾಹಿತ್ಯ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅದ್ಧೂರಿ ರಾಜ್ಯೋತ್ಸವ ಆಚರಿಸುವುದಾಗಿ ಕನ್ನಡಪರ ಹೋರಾಟಗಾರರು ನಿರ್ಧರಿಸಿದ್ದಾರೆ. ಅದ್ಧೂರಿ ಮೆರವಣಿಗೆ ಬಗ್ಗೆ ತುಟಿ ಬಿಚ್ಚದ ಸರ್ಕಾರದ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು.
ರಾಜಕೀಯ ಸಮಾವೇಶ, ಉಪ ಚುನಾವಣೆ ಪ್ರಚಾರದಲ್ಲಿ ಕೋವಿಡ್ ನಿಯಮ ಲೆಕ್ಕಕ್ಕಿಲ್ಲ. ಆದರೆ ರಾಜ್ಯೋತ್ಸವ ಮೆರವಣಿಗೆಗೆ ಮಾತ್ರ ಅನುಮತಿ ನೀಡಲು ಯಾಕೆ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಪ್ರಶ್ನಿಸಿದ್ರು. ಸರ್ಕಾರ ಅನುಮತಿ ನೀಡಲಿ, ನೀಡದೇ ಇರಲಿ. ಕೋವಿಡ್ ನಿಯಮ ಪಾಲಿಸಿ ಅದ್ಧೂರಿ ರಾಜ್ಯೋತ್ಸವ ಮಾಡಿಯೇ ಮಾಡ್ತೀವಿ. ಅದಕ್ಕಾಗಿ ಜೈಲಿಗೆ ಹೋಗಲು ಸಿದ್ಧ ಎಂದು ಕನ್ನಡಪರ ಸಂಘಟನೆಗಳ ಮುಖಂಡರು ಹೇಳಿದ್ದಾರೆ.
ಬೆಳಗಾವಿಯಲ್ಲಿ ಪ್ರತಿ ವರ್ಷ ರಾಜ್ಯೋತ್ಸವದ ಮೆರವಣಿಗೆ ನಡೆಯುತ್ತಿತ್ತು. ಕೋವಿಡ್ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ರಾಜ್ಯೋತ್ಸವದ ಮೆರವಣಿಗೆ ಮಾಡಿರಲಿಲ್ಲ. ಸದ್ಯ ಕೋವಿಡ್ ಪಾಸಿಟಿವಿಟಿ ರೇಟ್ ಕಡಿಮೆಯಾಗಿದ್ದು, ರಾಜ್ಯೋತ್ಸವ ಮೆರವಣಿಗೆಗೆ ಕನ್ನಡ ಪರ ಸಂಘಟನೆ ಮುಖಂಡರು ಪಟ್ಟು ಹಿಡಿದಿದ್ದಾರೆ.