ಚಿತ್ರದುರ್ಗ, ಮಾರ್ಚ್. 28 : ಚಿತ್ರದುರ್ಗ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತಿಗಳಿಗೆ ದಿಢೀರ್ ಭೇಟಿ ನೀಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ. ಸೋಮಶೇಖರ್ ಅವರು ಜಾಬ್ ಕಾರ್ಡ್ ಹೊಂದಿರುವ ಬಡ ಕುಟುಂಬಗಳಿಗೆ ಬೇಡಿಕೆ ಆಧಾರದಲ್ಲಿ ನರೇಗಾ ಯೋಜನೆಯಡಿ ತಕ್ಷಣ ಉದ್ಯೋಗ ನೀಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಚಿತ್ರದುರ್ಗ ತಾಲ್ಲೂಕಿನ ಹುಲ್ಲೂರು ಮತ್ತು ಗೊಡಬನಾಳ್ ಗ್ರಾಮ ಪಂಚಾಯಿತಿಗಳಿಗೆ ಹಾಗೂ ಪಂಡರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿ.ಪಂ. ಸಿಇಒ ಸೋಮಶೇಖರ್ ಶುಕ್ರವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹುಲ್ಲೂರು ಮತ್ತು ಗೊಡಬನಾಳ್ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ, ಗ್ರಾಮ ಪಂಚಾಯತ್ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರೊಂದಿಗೆ ಗ್ರಾಮಗಳ ಅಭಿವೃದ್ಧಿ ಬಗ್ಗೆ ಸಂವಾದ ನಡೆಸಿದರು. ಬಹುಮುಖ್ಯವಾಗಿ ಬೇಸಿಗೆ ಇರುವ ಪ್ರಯುಕ್ತ ಕುಡಿಯುವ ನೀರಿನ ಸಮಸ್ಯೆಗಳೇನಾದರೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇದೆಯಾ ಎಂದು ಜಿ.ಪಂ ಸಿಇಒ ಕೇಳಿದಾಗ, ಸಾರ್ವಜನಿಕರು ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಕುಡಿಯುವ ನೀರಿನ ಸಮಸ್ಯೆ ಇಲ್ಲ, ಬೇಸಿಗೆ ಕಾಲ ಪ್ರಾರಂಭವಾಗಿರುವುದರಿಂದ, ಬಡ ಕೂಲಿ ಕಾರ್ಮಿಕರಿಗೆ ಅಗತ್ಯಕ್ಕೆ ಅನುಗುಣವಾಗಿ ಉದ್ಯೋಗ ನೀಡಿ ಎಂದು ತಿಳಿಸಿದರು.
ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಬಗ್ಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಸಹಾಯಕ ಇಂಜಿನಿಯರ್ ಅವರಿಂದ ಮಾಹಿತಿ ಪಡೆದ ಅವರು, 2025-26ನೇ ಸಾಲಿನಲ್ಲಿ ಜಾಬ್ ಕಾರ್ಡ್ ಹೊಂದಿರುವ ಅರ್ಹ ಬಡ ಕುಟುಂಗಳಿಗೆ ತಕ್ಷಣವೇ ಬೇಡಿಕೆ ಆಧಾರದಲ್ಲಿ ಉದ್ಯೋಗ ನೀಡಿ, ನರೇಗಾ ಮಾರ್ಗಸೂಚಿ ಪ್ರಕಾರ ಕೆಲಸ ನಿರ್ವಹಿಸಲು ಸೂಚಿಸಿದರು. ಗ್ರಾಮಗಳಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡಿಕೊಳ್ಳಲು ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಗ್ರಂಥಾಲಯ, ಅಂಗನವಾಡಿ ಕೇಂದ್ರ, ಕರವಸೂಲಾತಿ ಮತ್ತು 15ನೇ ಹಣಕಾಸಿನ ಬಗ್ಗೆ ಹಾಗೂ ವಸತಿ ಯೋಜನೆಯ ಕುರಿತು ಮಾಹಿತಿ ಪಡೆದರು. ಇ-ಸ್ವತ್ತುಗಳನ್ನು ಸಕಾಲದಲ್ಲಿ ಸಾರ್ವಜನಿಕರಿಗೆ ವಿತರಿಸುವಂತೆ ಸೂಚನೆ ನೀಡಿದರು. ಈ ವೇಳೆ ಸಾರ್ವಜನಿಕರು, ಪರಿಶಿಷ್ಟ ಜಾತಿ ಜನಾಂಗದವರಿಗೆ ರುದ್ರಭೂಮಿ ನೀಡುವಂತೆ ಮನವಿ ಮಾಡಿಕೊಂಡರು. ಕುರುಬರಹಳ್ಳಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಪ್ರಸ್ತುತ ಬಾಡಿಗೆಯಲ್ಲಿ ಕಟ್ಟಡದಲ್ಲಿ ನಡೆಸುತ್ತಿದ್ದು, ಸರ್ಕಾರಿ ಜಾಗ ನೀಡುವಂತೆ ಗ್ರಾಮಸ್ಥರು ಕೋರಿದರು.
ನಂತರ ಪಂಡರಹಳ್ಳಿ ಮತ್ತು ಗೊಡಬನಾಳ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಅದರಲ್ಲಿ ಮುಖ್ಯವಾಗಿ ಔಷಧಿಗಳ ದಾಸ್ತಾನು ಕೊಠಡಿಗಳು, ಚುಚ್ಚುಮದ್ದು ನೀಡುವ ಕೊಠಡಿಗಳು, ಪ್ರಯೋಗ ಶಾಲಾ ಕೊಠಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಮಾಹಿತಿ ಪಡೆದುಕೊಂಡರು. ವೈದ್ಯಾಧಿಕಾರಿಗಳು, ನರ್ಸ್ ಮತ್ತು ಸಿಬ್ಬಂದಿಗಳೊಂದಿಗೆ ಸಂವಾದ ನಡೆಸಿದರು. ಸ್ವತಃ ಜಿ.ಪಂ. ಸಿಇಓ ಅವರು ಬಿ.ಪಿಯನ್ನು ವೈದ್ಯಾಧಿಕಾರಿಗಳಿಂದ ಪರಿಶೀಲಿಸಿಕೊಂಡು, ಅಲ್ಲೇ ಇದ್ದ ಹೊರ ರೋಗಿಗಳ ಆರೋಗ್ಯ ವಿಚಾರಿಸಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲಾ ಸೌಲಭ್ಯಗಳಿದ್ದು, ಸುತ್ತ-ಮುತ್ತಲಿನ ಗ್ರಾಮಸ್ಥರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹುಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪರ್ವೀನ್ ಬಾನು, ಉಪಾಧ್ಯಕ್ಷ ಬಸವರಾಜಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಪ್ರಸಾದ್, ಚಿತ್ರದುರ್ಗ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರವಿಕುಮಾರ್, ಸಹಾಯಕ ನಿರ್ದೇಶಕ (ನರೇಗಾ) ಯರ್ರಿಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು, ಸಿಬ್ಬಂದಿ ಇದ್ದರು.

