ಬೆಂಗಳೂರು: ಚುನಾವಣೆ ಹತ್ತಿರವಾಗುತ್ತಿದ್ದಂತೆ ಸರ್ಕಾರಿ ನೌಕರರ ಬೇಡಿಕೆಗಳು ಹೆಚ್ಚಾಗುತ್ತಾ ಹೋಗುತ್ತವೆ. ಪ್ರತಿಭಟನೆಯ ಕಾವು ಚುನಾವಣೆಗೆ ತಗಲಬಾರದು ಎಂಬ ಕಾರಣಕ್ಕೆ ಸರ್ಕಾರ ಕೂಡ ಅಸ್ತು ಎನ್ನುತ್ತೆ. ಈ ಕಾರಣಕ್ಕಾಗಿಯೆ ಪ್ರತಿಭಟನೆಗಳು ಜೋರಾಗುತ್ತವೆ. ಕಳೆದ ಹದಿನಾಲ್ಕು ದಿನದಿಂದ KPTCL ನೌಕರರು ಕೂಡ ಬೇಡಿಕೆ ಈಡೇರಿಸುವಂತೆ ಮುಷ್ಕರ ಕೈಗೊಂಡಿದ್ದರು, ಇಂದು ಕೊನೆಯ ದಿನವಾಗಿದ್ದ ಕಾರಣ ಸರ್ಕಾರ ಅಸ್ತು ಎಂದಿದೆ. ನಾಳೆಯೇ ನೌಕರರು ಕೂಡ ಮುಷ್ಕರವನ್ನು ವಾಪಾಸ್ ಪಡೆಯಲಿದ್ದಾರೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರರು ವೇತನ ಹೆಚ್ಚಿಸುವಂತೆ ಆಗ್ರಹಿಸಿ, ಪ್ರತಿಭಟನೆ ಕೈಗೊಂಡಿದ್ದರು. ಇಂದು ಸರ್ಕಾರಕ್ಕೆ ಗಡುವು ನೀಡಲಾಗಿತ್ತು. ನಾಳೆ ಎಲ್ಲಾ ಎಸ್ಕಾಂ ನೌಕರರು ಕೆಲಸಕ್ಕೆ ಗೈರಾಗಿ ಪ್ರತಿಭಟನೆಯಲ್ಲಿ ಭಾಗಿಯಾಗಲು ಕರೆ ನೀಡಲಾಗಿತ್ತು. 50 ಸಾವಿರ ನೌಕರರು ಮುಷ್ಕರದಲ್ಲಿ ಭಾಗಿಯಾಗಲಿದ್ದರು. ಈ ಹಿನ್ನೆಲೆ ಎಚ್ಚತ್ತುಕೊಂಡ ಸರ್ಕಾರ ಅವರ ಬೇಡಿಕೆ ಈಡೇರಿಕೆಗೆ ಅಸ್ತು ಎಂದಿದೆ.
ರಾಜ್ಯ ಸರ್ಕಾರದ ಎಲ್ಲಾ KPTCL ಮತ್ತು ಎಸ್ಕಾಂ ನೌಕರರ ವೇತನ ಪರಿಷ್ಕರಣೆ ಮಾಡಿದೆ. ಈಗಿನ ವೇತನದ ಮೇಲೆ ಶೇಕಡ 20ರಷ್ಟು ಹೆಚ್ಚಳ ಮಾಡಿದೆ. 2022ರ ಏಪ್ರಿಲ್ ನಿಂದ ಈ ಆದೇಶ ಅನ್ವಯವಾಗಲಿದೆ. ಹೀಗಾಗಿ ನೌಕರರು ನಾಳೆಯೇ ಮುಷ್ಕರ ವಾಪಾಸ್ ಪಡೆಯಲಿದ್ದಾರೆ.