ಬೆಂಗಳೂರು: ಈಚೆಗಷ್ಟೇ ವಿಶೇಷ ಅಧಿವೇಶನದ ಭಾಷಣ ಓದಲು ರಾಜ್ಯಪಾಲರು ಹಿಂದೇಟು ಹಾಕಿ, ಗದ್ದಲ ನಿರ್ಮಾಣ ಮಾಡಿದ್ದರು. ಇದೀಗ ಗಣರಾಜ್ಯೋತ್ಸವದ ಭಾಷಣ ಮಾಡುವುದಕ್ಕೂ ರಾಜ್ಯಪಾಲರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಪ್ರತಿ ವರ್ಷ ಕೂಡ ಗಣರಾಜ್ಯೋತ್ಸವದ ದಿನ ರಾಜ್ಯಪಾಲರು ಭಾಷಣವನ್ನ ಓದುತ್ತಾರೆ. ಈ ಭಾಷಣವನ್ನು ರಾಜ್ಯ ಸರ್ಕಾರವೇ ತಯಾರು ಮಾಡುತ್ತದೆ. ಆದರೆ ಈ ಬಾರಿ ರಾಜ್ಯ ಸರ್ಕಾರ ತಯಾರಿ ಮಾಡಿರುವ ಭಾಷಣವನ್ನು ಓದುವುದಕ್ಕೆ ರಾಜ್ಯಪಾಲರು ನಿರಾಕರಿಸಿದ್ದಾರೆ.
ಅದಕ್ಕೆ ಕಾರಣ ಸರ್ಕಾರ ಸಿದ್ಧಪಡಿಸಿರುವ ಭಾಷಣದಲ್ಲಿ ಕೇಂದ್ರ ಸರ್ಕಾರದ ನೀತಿಗಳ ಕುರಿತು ತೀವ್ರ ಟೀಕೆಗಳು ಇದಾವೆ ಎಂಬುದು ತಿಳಿದು ಬಂದಿದೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ, ಅನುದಾನ ಹಂಚಿಕೆಯಲ್ಲಿ ನಡೆಯುತ್ತಿರುವ ತಾರತಮ್ಯ, ಮಲತಾಯಿ ಧೋರಣೆ ಸೇರಿದಂತೆ ಹಲವು ಅಂಶಗಳನ್ನು ಉಲ್ಲೇಖ ಮಾಡಲಾಗಿದೆ. ಈ ಅಂಶಗಳು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವಂತೆ ಇರುವ ಕಾರಣಕ್ಕೆ ರಾಜ್ಯಪಾಲರು ಅಂತಹ ಭಾಷಣವನ್ನು ಓದುವುದಿಲ್ಲ ಎನ್ನುತ್ತಿದ್ದಾರಂತೆ.
ಇನ್ನು ರಾಜ್ಯಪಾಲರಾದ ಗೆಹ್ಲೋಟ್ ಅವರು ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ ಎನ್ನಲಾಗಿದೆ. ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡುವ ಅಂಶಗಳಿದ್ದರೆ ಅದನ್ನು ಓದಲು ಸಾಧ್ಯವಿಲ್ಲ. ಸರ್ಕಾರ ತಿದ್ದುಪಡಿ ಮಾಡದೆ ಇದ್ದರೆ ನಾನೇ ಸಿದ್ಧಪಡಿಸಿದ ಭಾಷಣವನ್ನು ಓದಿ ಮುಗಿಸುತ್ತೇನೆ ಎಂದಿದ್ದಾರೆ. ಈಚೆಗಷ್ಟೇ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ವೇಳೆ ಸದ್ದು ಗದ್ದಲ ಹೆಚ್ಚಾಗಿತ್ತು. ಭಾಷಣದ ಕೆಲವು ಭಾಗಗಳನ್ನು ಕೈಬಿಡುವಂತೆ ಸರ್ಕಾರಕ್ಕೆ ರಾಜ್ಯಪಾಲರು ಮೊದಲೇ ಸೂಚನೆ ನೀಡಿದ್ದರು. ಆದರೆ ರಾಜ್ಯಪಾಲರಿಂದ ಭಾಷಣ ಓದಿಸಿಯೇ ಸಿದ್ಧ ಎಂದು ರಾಜ್ಯ ಸರ್ಕಾರ ಪಟ್ಟು ಹಿಡಿದಿತ್ತು.






