ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜನವರಿ. 31 : ಹನ್ನೆರಡನೆ ಶತಮಾನದಲ್ಲಿಯೇ ಬಸವಾದಿ ಶರಣರು ಕಾಯಕಕ್ಕೆ ಒತ್ತು ಕೊಟ್ಟಿದ್ದರು. ನೀಡುವವರಿದ್ದರು. ಬೇಡುವವರಿರಲಿಲ್ಲ. ಏಕೆಂದರೆ ಎಲ್ಲರೂ ಕಾಯಕ ಮಾಡಿ ಬದುಕುತ್ತಿದ್ದರು. ಹೋರಾಟ, ಚಳುವಳಿಯ ಜೊತೆ ರೈತರು ಕೃಷಿ ಕಾಯಕದಲ್ಲಿ ತೊಡಗಿದಾಗ ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತವೆಂದು ಚಿತ್ತರಗಿ ಸಂಸ್ಥಾನ ಶಾಖಾ ಮಠ ಸಿದ್ದಯ್ಯನಕೋಟೆಯ ಬಸವಲಿಂಗ ಮಹಾಸ್ವಾಮಿಗಳು ಹೇಳಿದರು.
ಕೂಡಲ ಸಂಗಮ ಸುಕ್ಷೇತ್ರದ ಬಸವಪೀಠ 38 ನೇ ಶರಣ ಮೇಳ ಉತ್ಸವದಲ್ಲಿ ಒಕ್ಕಲಿಗ ಮುದ್ದಣ್ಣನವರ ನೆನಪಿನ ಪ್ರಮುಖ ಪ್ರಜೆ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ರೈತ ಮುಖಂಡ ಹಿರಿಯ ಹೋರಾಟಗಾರ ಬೇಡರೆಡ್ಡಿಹಳ್ಳಿ ಬಸವರೆಡ್ಡಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಒಕ್ಕೂಟ, ಪ್ರಗತಿಪರ ಸಂಘಟನೆಗಳ ವತಿಯಿಂದ ಎ.ಪಿ.ಎಂ.ಸಿ. ರೈತ ಭವನದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ರೈತ ಹೋರಾಟಗಾರರಲ್ಲಿ ಛಲವಿರಬೇಕು. ಪವಾಡ ಪುರುಷ ನಾಯಕನಹಟ್ಟಿಯ ಗುರುತಿಪ್ಪೇರುದ್ರಸ್ವಾಮಿ ಮಾಡಿದವರಿಗೆ ನೀಡು ಭಿಕ್ಷೆ ಎನ್ನುವ ಧೋರಣೆ ಮೇಲೆ ಕೆರೆ ಕಟ್ಟಿಸಿದ್ದಾರೆ. ಕ್ರಾಂತಿಕಾರಿ ಬಸವಣ್ಣ ಕಾಯಕವೆ ಕೈಲಾಸ ಎನ್ನುವ ಸಂದೇಶವನ್ನು ವಿಶ್ವಕ್ಕೆ ಸಾರಿದ್ದಾರೆ. ಸಂಘಟನೆಯಿಂದ ಮಾತ್ರ ಆಳುವ ಸರ್ಕಾರಗಳನ್ನು ಮಣಿಸಲು ಸಾಧ್ಯ. ಬಸವಣ್ಣನವರು ಜಾತಿ ನಿರ್ಮೂಲನೆ ಮಾಡಿದರೆ. ಇಂದಿನ ಸಮಾಜದಲ್ಲಿ ಜಾತಿಯತೆ ತಾಂಡವವಾಡುತ್ತಿದೆ. ಬಸವಾದಿ ಶರಣರ ವಚನ ಸಾಹಿತ್ಯಗಳನ್ನು ಎಲ್ಲರೂ ಓದಲೇಬೇಕೆಂದರು.
ಸಾಮಾಜಿಕ ಚಿಂತಕ ಜೆ.ಯಾದವರೆಡ್ಡಿ ಮಾತನಾಡಿ ದೇಶಕ್ಕೆ ಅನ್ನ ನೀಡುವ ರೈತ ಅಸಂಘಟಿತ, ಅಸಹಾಯಕನಾಗಿದ್ದಾನೆ. ಕಾರ್ಮಿಕ ಸಂಘಟನೆಗಳಿಗೆ ಗುರಿ, ಸ್ಪಷ್ಟತೆಯಿದೆ. ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯಿದೆಯನ್ನು ವಿರೋಧಿಸಿ ರೈತರು ಒಂದು ವರ್ಷಗಳಿಗೂ ಹೆಚ್ಚು ಕಾಲ ದೆಹಲಿಯಲ್ಲಿ ಚಳುವಳಿ ನಡೆಸಿದಾಗ 720 ರೈತರು ಪ್ರಾಣ ತೆತ್ತರು. ನಿಮ್ಮ ಬುಡಕ್ಕೆ ನೀರು ಬಂದಾಗಲು ರೈತರು ಸುಮ್ಮನಿರುತ್ತಾರೆಂದರೆ ಚಳುವಳಿಗೆ ಅರ್ಥವಿಲ್ಲದಂತಾಗುತ್ತದೆ. ದೌರ್ಜನ್ಯ, ದಬ್ಬಾಳಿಕೆಗಳು ನಡೆದಾಗಲಾದರೂ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಂಘಟಿತರಾಗಿ ಹೋರಾಡಿ ಎಂದು ಕರೆ ನೀಡಿದರು.
ಮಧ್ಯಕರ್ನಾಟಕದ ಬಯಲುಸೀಮೆ ಚಿತ್ರದುರ್ಗಕ್ಕೆ ಭದ್ರಾಮೇಲ್ದಂಡೆಗಾಗಿ ಅನೇಕ ವರ್ಷಗಳಿಂದಲೂ ಹೋರಾಟ ನಿರಂತರವಾಗಿದೆ. ಜಿಲ್ಲೆಯ ರೈತರು ಒಗ್ಗಟ್ಟಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಶಕ್ತಿ ತೋರಿಸದಿದ್ದರೆ ಯಾವ ಯೋಜನೆಗಳು ಜಾರಿಯಾಗುವುದಿಲ್ಲ ಎಂದು ಎಚ್ಚರಿಸಿದರು.
ಪತ್ರಕರ್ತರ ದೊಣ್ಣೆಹಳ್ಳಿ ಗುರುಮೂರ್ತಿ ಮಾತನಾಡುತ್ತ ಎಲ್ಲಾ ಕಡೆ ರೈತರ ಮೇಲೆ ಹಲ್ಲೆ, ದೌರ್ಜನ್ಯಗಳು ನಡೆಯುತ್ತಿವೆ. ಸರ್ಕಾರಿ ಆಸ್ಪತ್ರೆ ಭ್ರಷ್ಠಾಚಾರದ ಕೂಪವಾಗಿದೆ. ರೈತ ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ರೈತ ನಾಯಕ ನಂಜುಂಡಸ್ವಾಮಿ, ಬಸವಣ್ಣನವರ ಆದರ್ಶಗಳನ್ನು ರೈತರು ಧರಿಸಬೇಕು. ತತ್ವಬದ್ದತೆಯ ಅಧ್ಯಯನಶೀಲ ಶಿಬಿರಗಳು ಎಲ್ಲಿಯವರೆಗೂ ನಡೆಯುವುದಿಲ್ಲವೋ ಅಲ್ಲಿತನಕ ನಕಲಿ ತತ್ವ ಜೀವಂತವಾಗಿರುತ್ತದೆಂದು ಹೇಳಿದರು.
ಸರ್ಕಾರಿ ಕಚೇರಿ, ಪೊಲೀಸ್ ಠಾಣೆಗಳಲ್ಲಿ ನಡೆಯುವ ಅನ್ಯಾಯದ ವಿರುದ್ದ ರೈತರು ಹೋರಾಟಕ್ಕಿಳಿಯಬೇಕು. ಕೋಮುವಾದಿಗಳಿಂದ ಅಪಾಯ ಖಂಡಿತ. ಸಂಘಟನೆ, ಹೋರಾಟಗಳ ಜೊತೆಗೆ ತತ್ವಬದ್ದರಾಗಿರದಿದ್ದರೆ ಅವಕಾಶವಾದಿಗಳಾಗುತ್ತೀರ ಎಂದು ಜಾಗೃತಿಗೊಳಿಸಿದರು.
ಕಾಂ.ಜಿ.ಸಿ.ಸುರೇಶ್ಬಾಬು ಮಾತನಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಹಿರಿಯರು ಹೋರಾಡಿ ಪ್ರಾಣ ತ್ಯಾಗ ಮಾಡಿದ್ದಾರೆ. ಅದೇ ರೀತಿ ರೈತರು ತಾವು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸಿಗಬೇಕಾದರೆ ನಿರಂತರ ಹೋರಾಟವಿರಬೇಕು. ನೀರು, ವಿದ್ಯುತ್ ರೈತರಿಗೆ ಕಾಡುತ್ತಿರುವ ಸಮಸ್ಯೆ. ನಕಲಿ ಶಾಲುಗಳನ್ನು ಹೆಗಲ ಮೇಲೆ ಹಾಕುವವರ ಹಾವಳಿ ಜಾಸ್ತಿಯಾಗಿದೆ. ಬದುಕಿಗಾಗಿ ಹೋರಾಟ, ಹೋರಾಟಕ್ಕಾಗಿ ಬದುಕು ಎನ್ನುವ ಸಿದ್ದಾಂತದ ಮೇಲೆ ರೈತರು ನಿಲ್ಲಬೇಕಾಗುತ್ತದೆಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ರೈತ ನಾಯಕ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಆಳುವ ಸರ್ಕಾರಗಳ ಅನ್ಯಾಯ, ಅಕ್ರಮ, ದೌರ್ಜನ್ಯದ ನಡುವೆಯೇ ರೈತನಾಗಿ ಸ್ವಾಭಿಮಾನದಿಂದ ಬದುಕುತ್ತಿದ್ದೇನೆ. ಸರ್ಕಾರದಿಂದ ಯಾವ ನೆರವನ್ನು ತೆಗೆದುಕೊಂಡಿಲ್ಲ. ಹಸಿರುಶಾಲಿನ ದುರುಪಯೋಗವಾಗಬಾರದು. ಛಿದ್ರಗೊಂಡಿರುವ ರೈತ ಸಂಘಟನೆಗಳೆಲ್ಲಾ ಒಂದಾಗಿ ಐತಿಹಾಸಿಕ ಹೋರಾಟಕ್ಕೆ ಮುಂದಾಗಬೇಕೆಂಬುದು ನನ್ನ ಆಸೆ ಎಂದು ಹೇಳಿದರು.
ರೈತ ನಾಯಕ ನಂಜುಂಡಸ್ವಾಮಿರವರಲ್ಲಿ ಅಘಾದವಾದ ಶಕ್ತಿಯಿತ್ತು. ಅವರ ಚಿಂತನೆ, ವಿಚಾರಧಾರೆಗಳನ್ನು ಅಳವಡಿಸಿಕೊಂಡು ರೈತರು ಹೋರಾಟದಲ್ಲಿ ನಿರತರಾಗಬೇಕು. ಚಿಕ್ಕಂದಿನಿಂದಲೂ ನಾನು ಕೃಷಿಯಲ್ಲಿ ತೊಡಗಿದ್ದರಿಂದ ಪ್ರಮುಖ ಪ್ರಜೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿರುವುದು ಇಡಿ ರೈತ ಕುಲಕ್ಕೆ ಸಂದ ಗೌರವ ಎಂದು ಸಂತಸ ಹಂಚಿಕೊಂಡರು.
ರಾಷ್ಟ್ರೀಯ ಬಸವದಳ ಬೆಂಗಳೂರಿನ ವೀರೇಶ್ ಮಾತನಾಡುತ್ತ ಸಮಾಜಕ್ಕಾಗಿ ಬದುಕಿರುವ ರೈತರ ಹೋರಾಟ ಪ್ರಖರ, ಪ್ರಬುದ್ದವಾಗಿ ಬೆಳೆಯಬೇಕು. ರೈತ ಮುಖಂಡ ಬೇಡರೆಡ್ಡಿಹಳ್ಳಿ ಬಸವರೆಡ್ಡಿಗೆ ಸಿಕ್ಕಿರುವ ಪ್ರಶಸ್ತಿ ವಿಶಿಷ್ಟವಾದುದು. ಹೋರಾಟದ ಜೊತೆ ರೈತರು ಸೇವಾ ಮನೋಭಾವ ಮೈಗೂಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದಿನೇಶ್ಗೌಡಗೆರೆ, ರೈತ ಮುಖಂಡ ಆರ್.ಬಿ.ನಿಜಲಿಂಗಪ್ಪ, ಕರ್ನಾಟಕ ಶಾಂತಿ ಮತ್ತು ಸೌಹಾರ್ಧ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್ಕುಮಾರ್, ಚಿಕ್ಕಬ್ಬಿಗೆರೆ ನಾಗರಾಜ್ ಇವರುಗಳು ಮಾತನಾಡಿದರು.
ಜಿಲ್ಲೆಯ ಆರು ತಾಲ್ಲೂಕಿನ ರೈತ ಮುಖಂಡರುಗಳು ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.