ದೆಹಲಿ: ಕಳೆದ ವಾರವಷ್ಟೇ ನೀಟ್ ಪರೀಕ್ಷೆ ದಿನಾಂಕ ಮುಂದೂಡಿಕೆಯಾಗಿತ್ತು. ವಿದ್ಯಾರ್ಥಿಗಳೆಲ್ಲ ಪರೀಕ್ಷೆಗೆ ಸಿದ್ಧವಾಗಿ, ಪರೀಕ್ಷಾ ಕೇಂದ್ರಕ್ಕೂ ಪ್ರಯಾಣ ಬೆಳೆಸಿದ್ದರು. ಆದರೆ ರಾತ್ರಿ 10 ಗಂಟೆಯ ಸುಮಾರಿಗೆ ಪರೀಕ್ಷೆ ರದ್ದಾದ ಮಾಹಿತಿಯನ್ನು ಕೇಂದ್ರ ಸರ್ಕಾರ ಅನೌನ್ಸ್ ಮಾಡಿತ್ತು. ಇದು ಆಕ್ರೋಶಕ್ಕೂ ಕಾರಣವಾಗಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸದನದಲ್ಲಿ ಚರ್ಚೆ ನಡೆಸಬೇಕೆಂದು ವಿಪಕ್ಷಗಳು ಪಟ್ಟು ಹಿಡಿದಿದ್ದವು. ಆದರೆ ಸ್ಪೀಕರ್ ಇದ್ಯಾವುದಕ್ಕೂ ಅವಕಾಶ ಕೊಡಲಿಲ್ಲ.
ಈ ಬಗ್ಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೆಂದ್ರ ಪ್ರಧಾನ್ ಪ್ರತಿಕ್ರಿಯೆ ನೀಡಿದ್ದಾರೆ. ಸರ್ಕಾರವೂ ಎಲ್ಲಾ ರೀತಿಯ ಚರ್ಚೆಗೆ ಸಿದ್ಧವಾಗಿದೆ. ಆದರೆ ಎಲ್ಲವೂ ಸಂಪ್ರದಾಯ ಹಾಗೂ ಸಭ್ಯತೆಯಲ್ಲಿ ನಡೆಯಬೇಕು. ನಿನ್ನೆ ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿಯೇ ಹೇಳಿದ್ದಾರೆ. ಯಾವುದೇ ಸಮಸ್ಯೆಯನ್ನು ಎದುರಿಸಲು ನಾವೂ ಸಿದ್ಧರಿದ್ದೇವೆ ಎಂದು ಹೇಳುವ ಮೂಲಕ ಸರ್ಕಾರದ ಉದ್ದೇಶವನ್ನು ಹೇಳಿದ್ದಾರೆ. ಸರ್ಕಾರದ ಜವಾಬ್ದಾರಿ ದೇಶದ ಯುವಕರ ಕಡೆಗೆ ಇದೆ. ಸರ್ಕಾರವೂ ದೇಶದ ವಿದ್ಯಾರ್ಥಿಗಳ ಪರವಾವಿ ನಿಲ್ಲಲು ಸಿದ್ಧವಿದೆ.
ಹಾಗಾದ್ರೆ ಗೊಂದಲಗಳೇನು..? ನಾವೂ ಕಠಿಣ ಕ್ರಮ ತೆಗೆದುಕೊಳ್ಳಲಿದ್ದೇವೆ. ಸಿಬಿಐ ತಪ್ಪಿತಸ್ಥರನ್ನು ಪತ್ತೆ ಹಚ್ಚಲಿದೆ. ನಾವೂ ಯಾರನ್ನು ಬಿಡುವುದಿಲ್ಲ. ಸುಧಾರಣೆಗಾಗಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಎನ್ಟಿಎ ಉಸ್ತುವಾರಿ ವಹಿಸಿದ್ದವರನ್ನು ತೆಗೆದು ಹಾಕಲಾಗಿದೆ. ಹಿರಿಯ ಅಧಿಕಾರಿಗಳಿಗೆ ಜವಾಬ್ದಾರಿಯನ್ನು ನೀಡಲಾಗಿದೆ. ಇನ್ನು ಶೀಘ್ರದಲ್ಲಿಯೇ ಎಲ್ಲಾ ಪರೀಕ್ಷೆಗಳ ದಿನಾಂಕವನ್ನು ಬಿಡುಗಡೆ ಮಾಡಲಾಗುತ್ತದೆ. ಚರ್ಚೆಯಲ್ಲಿ ಭಾಗಿಯಾಗಬೇಕೆಂದರೆ ಮೊದಲು ರಾಜಕೀಯದಿಂದ ಹೊರಬರಬೇಕಿದೆ ಎಂದಿದ್ದಾರೆ.