ವಿಜಯಪುರ: ಲೋಕಸಭೆಯ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರಲ್ಲ ಅಂತ ಈಗಾಗಲೇ ಬಿಜೆಪಿ ನಾಯಕರು ಸಾಕಷ್ಟು ಬಾರಿ ಹೇಳಿದ್ದಾರೆ. ಇದೀಗ ಮಾಜಿ ಸಚಿವ ಮುರುಗೇಶ್ ನಿರಾಣಿ ಕೂಡ ಅದನ್ನೇ ಹೇಳಿದ್ದಾರೆ. ಅತಿ ಶೀಘ್ರದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗುತ್ತೆ ಎಂಬ ಭವಿಷ್ಯ ನುಡಿದಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಹೈಕಮಾಂಎ್ ಜೊತೆಗೆ 50 ಜನ ಟಚ್ ನಲ್ಲಿದ್ದಾರೆ. ಡಿಸಿಎಂ ಸ್ಥಾನದ ಆಕಾಂಕ್ಷಿಗಳು, ಸಚಿವ ಸ್ಥಾನದ ಆಕಾಂಕ್ಷಿಗಳು, ಅಸಮಾಧಾನಿತ ಶಾಸಕರು ಹೀಗೆ 50 ಮಂದಿ ಹೈಕಮಾಂಡ್ ಟಚ್ ನಲ್ಲಿದ್ದಾರೆ. ಅವರೇ ಬಂದು ಬಾಗಿಲು ತಟ್ಟುತ್ತಿದ್ದಾರೆ. ನಾವಾಗಿ ಸರ್ಕಾರ ಕೆಡವಲ್ಲ. ತಾನಾಗಿಯೇ ಪತನವಾಗುತ್ತೆ. ಯಾವಾಗ ಪತನವಾಗುತ್ತೆ ಎಂಬುದನ್ನು ಕಾದು ನೋಡಬೇಕಿದೆ. ಕಾಂಗ್ರೆಸ್ ಮಾತನಾಡೋದು ಒಂದು, ಮಾಡೋದು ಇನ್ನೊಂದು. ಕಾಂಗ್ರೆಸ್ ನಲ್ಲಿ ಮೇಲ್ನೋಟಕ್ಕಷ್ಟೇ ಎರಡು ಬಣ ಇದೆ. ಆದರೆ ಒಳಗೆ ನಾಲ್ಕು ಬಣ ಇದೆ ಎಂದಿದ್ದಾರೆ.
ಸಿಎಂ ಸ್ಥಾನ ಕೇಳುತ್ತಿದ್ದಾರೆ, ನಾಲ್ಕು ಡಿಸಿಎಂಗಳಿಗೆ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಕಾಂಗ್ರೆಸ್ ಸರ್ಕಾರವೇ ಗೊಂದಲದಲ್ಲಿದೆ. ಈ ಕಾಂಗ್ರೆಸ್ ಸರ್ಕಾರ ಐದು ವರ್ಷ ಪೂರೈಸುವುದಿಲ್ಲ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಇದೆಯಾ ಎಂಬುದೇ ಗೊತ್ತಾಗುತ್ತಿಲ್ಲ. ಗ್ಯಾರಂಟಿ ಮೋಸದಿಂದ ಅಧಿಕಾರಕ್ಕೆ ಬಂದಿದ್ದಾರೆ. ಫ್ರೀ ಕರೆಂಟ್ ಅಂತ ಹೇಳಿ ಪವರ್ ಕಟ್ ಮಾಡುತ್ತಿದ್ದಾರೆ. ಮಹಿಳೆಯರಿಗೆ ಬಸ್ ಫ್ರೀ ಅಂದ್ರು, ಆಮೇಲೆ ಬಸ್ ಗಳನ್ನೇ ಕಡಿಮೆ ಮಾಡಿದ್ದಾರೆ. ರಾಜ್ಯದ 7 ಕೋಟಿ ಜನರಿಗೆ ಸರ್ಕಾರ ಮೋಸ ಮಾಡುತ್ತಿದೆ. ಹಿಂದಿನ ಸರ್ಕಾರದ ಕಾಮಗಾರಿಗಳು ನಡೆಯುತ್ತಿಲ್ಲ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.