ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಜ.02) : ಬಡ ಕಲಾವಿದರಿಗೆ ಉತ್ತೇಜನ, ಪ್ರೋತ್ಸಾಹ ಕೊಡುವಲ್ಲಿ ಸರ್ಕಾರ ಸ್ಪಂದಿಸಬೇಕು. ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಕಬೀರಾನಂದಾಶ್ರಮದ ಶಿವಲಿಂಗಾನಂದ ಮಹಾಸ್ವಾಮಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಹಿತ್ಯ ಸಾಮ್ರಾಜ್ಯ ನಾಟ್ಯ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವುಗಳ ಸಹಯೋಗದೊಂದಿಗೆ ಕಬೀರಾನಂದಾಶ್ರಮದ ಆವರಣದಲ್ಲಿರುವ ರಂಗ ಮಂದಿರದಲ್ಲಿ ಇತ್ತೀಚೆಗೆ ನಡೆದ ಸಂಗೀತೋತ್ಸವ ಹಾಗೂ ಮಹಿಷಾಸುರ ಮರ್ಧಿನಿ ಭಕ್ತಿ ಪ್ರಧಾನ ಪೌರಾಣಿಕ ನಾಟಕ ಉದ್ಗಾಟಿಸಿ ಮಾತನಾಡಿದರು.
ಕಳೆದ ಆರು ತಿಂಗಳಿಂದ ನಿಂತಿದ್ದ ಜಿಲ್ಲೆಯ ಕಲಾವಿದರ ಮಾಶಾಸನವನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್ ನೀಡಿರುವುದು ಕಲಾವಿದರ ಬದುಕು ಸುಧಾರಣೆಯಾದಂತಾಗಿದೆ. ಕಲಾವಿದರು ಕಷ್ಟದಲ್ಲಿರುವುದರಿಂದ ಸರ್ಕಾರದ ಜೊತೆಗೆ ಪ್ರೇಕ್ಷಕರು ಕಲಾವಿದರು ಹಾಗೂ ಸಂಗೀತಗಾರರನ್ನು ಉಳಿಸಿ ಬೆಳೆಸಬೇಕಿದೆ ಎಂದು ಮನವಿ ಮಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ಜಾನಪದ ಹಾಡುಗಾರ ಡಿ.ಓ.ಮುರಾರ್ಜಿ, ಲೇಖಕ ಹೆಚ್.ಆನಂದ್‍ಕುಮಾರ್, ವಿಮಲಾಕ್ಷಿ, ತಿಪ್ಪೇರುದ್ರಣ್ಣ, ನಯನ್‍ಕುಮಾರ್, ವಿಜಯ್‍ಕುಮಾರ್, ಸಾಹಿತ್ಯ ಸಾಮ್ರಾಜ್ಯ ನಾಟ್ಯ ಸಂಘದ ಅಧ್ಯಕ್ಷೆ ಸಿ.ಕೆ.ನಳಿನ, ಟಿ.ನಾಗೇಂದ್ರ ವೇದಿಕೆಯಲ್ಲಿದ್ದರು. ಮೈಸೂರಿನ ಶಕ್ತಿ ಕನ್ನಡ ನಾಟಕ ಕಲಾ ಸಂಘದವರು ರಂಗಗೀತೆಗಳನ್ನು ಹಾಡಿದರು.
ಕೆ.ಗಂಗಾಧರ್ ಮತ್ತು ತಂಡದಿಂದ ಸುಗಮ ಸಂಗೀತ, ತುರುವನೂರಿನ ಮೈಲಾರಿ ಮತ್ತು ತಂಡದ ವಚನ ಸಂಗೀತ, ಹಿಮಂತರಾಜ ಟಿ. ಮತ್ತು ತಂಡದಿಂದ ತತ್ವಪದ ಗಾಯನ, ಜಾನಪದ ಸಂಗೀತ, ಭಕ್ತಿಗೀತೆ, ಭಾವಗೀತೆಗಳು ಪ್ರೇಕ್ಷಕರನ್ನು ರಂಜಿಸಿತು.