ಸರ್ಕಾರ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಸಲಿ : ಯೋಗೀಶ್ ಸಹ್ಯಾದ್ರಿ

2 Min Read

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 13  : ಕರ್ನಾಟಕ ಸರ್ಕಾರವು 2021 ರಿಂದಲೂ ಇಲ್ಲಿಯವರೆಗೆ ಸ್ಥಳೀಯ ಸಂಸ್ಥೆಗಳಾದ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಬಿಬಿಎಂಪಿ ಚುನಾವಣೆಯನ್ನು ನಡೆಸದೆ ಇರುವುದು ಖಂಡನೀಯ. ಇಂಥಹ ನಿರ್ಧಾರಗಳಿಂದ ಅಭಿವೃದ್ಧಿ ಕುಂಠಿತವಾಗುತ್ತದೆ. ಈ ಬೆಳವಣಿಗೆಗಳು ಪ್ರಜಾಪ್ರಭುತ್ವಕ್ಕೆ ಮಾರಕವಾಗಿ ಪರಿಣಮಿಸಲಿದೆ. ಆದ್ದರಿಂದ, ಆದಷ್ಟು ಶೀಘ್ರವಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸಲು ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಲೇಖಕ ಹಾಗು ಚಿತ್ರದುರ್ಗ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು ಅಧ್ಯಕ್ಷ ಯೋಗೀಶ್ ಸಹ್ಯಾದ್ರಿ ಸರ್ಕಾರವನ್ನು ಬಹಿರಂಗ ಪತ್ರದ ಮೂಲಕ ಆಗ್ರಹಿಸಿದ್ದಾರೆ.

ದೇಶದ ಯಾವುದೇ ರಾಜ್ಯ ಸರ್ಕಾರಗಳು ವಿಧಾನಸಭೆ, ವಿಧಾನಪರಿಷತ್ ಹಾಗು ಲೋಕಸಭಾ ಚುನಾವಣೆಗಳನ್ನು ನಡೆಸಲು ತುದಿಗಾಲಲ್ಲಿ ನಿಂತಿರುತ್ತವೆ. ಪ್ರಜೆಗಳನ್ನು ತಮ್ಮ ತಮ್ಮ ಪಕ್ಷಗಳತ್ತ ಆಕರ್ಷಿಸಲು ಹಪಹಪಿಸುತ್ತಿರುತ್ತವೆ. ಆದರೆ ಸ್ಥಳೀಯ ಸಂಸ್ಥೆಗಳಾದ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗಳ ಒಟ್ಟು 31 ಜಿಲ್ಲೆಗಳ 239 ತಾಲ್ಲೂಕುಗಳ 1130 + 3671 ಕ್ಷೇತ್ರಗಳ ಸದಸ್ಯ ಸ್ಥಾನದ (ಬಿಬಿಎಂಪಿ ಹೊರತುಪಡಿಸಿ) ಚುನಾವಣೆಗಳನ್ನು ನಡೆಸಲು ಮೀನಾಮೇಶ ಎಣಿಸುತ್ತಿರುವುದು ನಿಜಕ್ಕೂ ದುರ್ದೈವ ಮತ್ತು ಖಂಡನೀಯವಾದುದು ಎಂದು ಅಭಿಪ್ರಾಯಪಟ್ಟಿದ್ದಾರೆ. ದುರದೃಷ್ಟವೆಂದರೆ, ಈ ಹಿಂದೆಯಿದ್ದ ಸಮ್ಮಿಶ್ರ ಸರ್ಕಾರವಾಗಲಿ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರೂ ಪ್ರಮುಖ ರಾಜಕೀಯ ಪಕ್ಷಗಳು ಸ್ಥಳೀಯ ಸಂಸ್ಥೆಗಳ – ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಬಿಬಿಎಂಪಿ ಚುನಾವಣೆಯನ್ನು ನಡೆಸಲು ವಿಫಲವಾಗಿವೆ. ಇದರಿಂದ 15 ನೇ ಹಣಕಾಸು ಯೋಜನೆಯಿಂದ ಕೇಂದ್ರದಿಂದ ರಾಜ್ಯಕ್ಕೆ ಒಟ್ಟಾರೆಯಾಗಿ ಇಲ್ಲಿಯವರೆಗೆ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ಬರಬೇಕಾಗಿದ್ದ ಸುಮಾರು 2800 ಕೋಟಿ ರೂಪಾಯಿಗಳು ಬರದೇ ಇರುವುದು ವಿಪರ್ಯಾಸ ಹಾಗು ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ದೊಡ್ಡ ನಷ್ಟವಾಗಿದೆ. ಇದು ದೇಶದ ಪ್ರತಿಯೊಬ್ಬ ಪ್ರಜೆಯು ಅತ್ಯಂತ ಜವಾಬ್ದಾರಿಯಿಂದ ಚಿಂತಿಸುವ ವಿಷಯವಾಗಿದೆ ಎಂದು ತಿಳಿಸಿದ್ದಾರೆ.

ಆಡಳಿತ ಪಕ್ಷ ಸೇರಿದಂತೆ ರಾಜ್ಯದ ಮೂರೂ ಪ್ರಮುಖ ಪಕ್ಷಗಳ ಸರ್ಕಾರಗಳ ನಿರ್ಲಕ್ಷ್ಯದ ಪರಿಣಾಮವಾಗಿ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗಳಲ್ಲಿ ಚುನಾಯಿತ ಪ್ರತಿನಿಧಿಗಳಿಲ್ಲದೆ ಸರ್ಕಾರಿ ಆಡಳಿತಾಧಿಕಾರಿಗಳು ಸಾಮಾನ್ಯ ಜನರ ಕಷ್ಟಗಳಿಗೆ ಸ್ಪಂದಿಸುವುದು ಅಸಾಧ್ಯವಾಗಿದೆ ಎಂದು ಹೇಳಿದ್ದಾರೆ. ಪ್ರತಿಯೊಂದು ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥ ಬುದ್ಧಿಯನ್ನು ಬಿಟ್ಟು ಆದಷ್ಟು ಶೀಘ್ರದಲ್ಲಿ
ಸ್ಥಳೀಯ ಸಂಸ್ಥೆಗಳಾದ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗಳ ಒಟ್ಟು 31 ಜಿಲ್ಲೆಗಳ 239 ತಾಲ್ಲೂಕುಗಳ 1130 + 3671 ಕ್ಷೇತ್ರಗಳ ಸದಸ್ಯ ಸ್ಥಾನದ ಚುನಾವಣೆಯನ್ನು ನಡೆಸುವ ಮೂಲಕ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾಗಿರುವ 2800 ಕೋಟಿ ರೂಪಾಯಿಗಳನ್ನು ಬಳಸಿಕೊಂಡು ಜಿಲ್ಲೆ, ತಾಲ್ಲೂಕುಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಒತ್ತಾಯಿಸಿದ್ದಾರೆ. ಇಲ್ಲದಿದ್ದ ಪಕ್ಷದಲ್ಲಿ, ಸಾಮಾನ್ಯ ಜನರು, ಪ್ರಜ್ಞಾವಂತರು, ಶಿಕ್ಷಕರು, ಸಾಹಿತಿಗಳು, ವಿದ್ಯಾರ್ಥಿಗಳು ಮತ್ತು ಅನೇಕರು ಇಂಥಹ ರಾಜಕೀಯ ನಿರ್ಲಕ್ಷ್ಯತೆಗಳಿಂದ ಬೇಸತ್ತು ಸರ್ಕಾರಗಳ ವಿರುದ್ಧ ರಾಜ್ಯದ ಪ್ರತಿಯೊಂದು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಕೊಡುವುದರ ಜೊತೆಗೆ, ಬೀದಿಗಿಳಿದು ಹೋರಾಟ ಮಾಡುವ ಕಾಲ ದೂರವಿಲ್ಲ ಎಂದು ಸಾಹಿತಿ, ಉಪನ್ಯಾಸಕರಾದ ಯೋಗೀಶ್ ಸಹ್ಯಾದ್ರಿ ತಮ್ಮ ಬಹಿರಂಗ ಪತ್ರದ ಮೂಲಕ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *