ಬೆಂಗಳೂರು.ಆಗಸ್ಟ್.23: ಕರ್ನಾಟಕದಲ್ಲಿ ‘ಪನೀರ್’ ಹೆಸರಿನಲ್ಲಿ ಮಾರಾಟವಾಗುತ್ತಿರುವ ಅನಾಲಾಗ್ ಅಥವಾ ನಾನ್-ಡೈರಿ ಪನೀರ್ಗಳ ತಯಾರಿಕೆ, ಸಂಗ್ರಹಣೆ, ವಿತರಣೆ ಹಾಗೂ ಮಾರಾಟಕ್ಕೆ ರಾಜ್ಯ ಸರ್ಕಾರ ಒಂದು ವರ್ಷದ ಅವಧಿಗೆ ನಿಷೇಧ ಹೇರಿದೆ. ಈ ಸಂಬಂಧ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟಕ್ಕೆ ಸಂಬಂಧಿಸಿದಂತೆ ರಾಜ್ಯದ ವಿವಿಧ ಪ್ರದೇಶಗಳಲ್ಲಿ ನಡೆಸಿದ ತಪಾಸಣೆ ವೇಳೆ, ‘ಪನೀರ್’ ಹೆಸರಿನಲ್ಲಿ ಅನಾಲಾಗ್ ಅಥವಾ ನಾನ್-ಡೈರಿ ಪನೀರ್ ಮಾರಾಟ ಮಾಡುತ್ತಿರುವುದು ಕಂಡುಬಂದಿತ್ತು. ಹೀಗಾಗಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಇಂತಹ ಉತ್ಪನ್ನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಇಲಾಖೆ ಮುಂದಾಗಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006ರ ನಿಯಮಗಳು ಹಾಗೂ FSSAI ನಿಗದಿಪಡಿಸಿರುವ ಮಾನದಂಡಗಳ ಪ್ರಕಾರ ‘ಪನೀರ್’ ಎಂಬ ಉತ್ಪನ್ನವು ಹಾಲಿನಿಂದಲೇ ತಯಾರಾಗಿರಬೇಕು. ಹಾಲಿನ ಕೊಬ್ಬಿನ ಬದಲಿಗೆ ಅಥವಾ ಅದರೊಂದಿಗೆ ಸಸ್ಯಜನ್ಯ ಎಣ್ಣೆ, ಸಸ್ಯಜನ್ಯ ಕೊಬ್ಬು, ಸೋಯಾ ಪ್ರೋಟೀನ್, ಪಿಷ್ಟ (ಸ್ಟಾರ್ಚ್) ಅಥವಾ ಇತರೆ ನಾನ್-ಡೈರಿ ಪದಾರ್ಥಗಳನ್ನು ಬಳಸಿ ತಯಾರಿಸಿದ ಉತ್ಪನ್ನವನ್ನು ‘ಪನೀರ್’ ಎಂದು ಮಾರಾಟ ಮಾಡಲು ಅವಕಾಶವಿಲ್ಲ.
ರಾಜ್ಯದ ವಿವಿಧ ಹೋಟೆಲ್ಗಳು, ರೆಸ್ಟೋರೆಂಟ್ಗಳು ಸೇರಿದಂತೆ ಆಹಾರ ಮಳಿಗೆಗಳಲ್ಲಿ ನಡೆಸಿದ ತಪಾಸಣೆ ವೇಳೆ ಕೆಲವು ಪನೀರ್ ಮಾದರಿಗಳಲ್ಲಿ ಸಸ್ಯಜನ್ಯ ಎಣ್ಣೆ, ಸೋಯಾ ಪ್ರೋಟೀನ್, ಪಿಷ್ಟ ಸೇರಿದಂತೆ ಇತರೆ ಡೈರಿ ಅಲ್ಲದ ಪದಾರ್ಥಗಳ ಬಳಕೆ ಕಂಡುಬಂದಿದೆ. ಇಂತಹ ಉತ್ಪನ್ನಗಳನ್ನು ಗ್ರಾಹಕರಿಗೆ ನೈಜ ಪನೀರ್ ಎಂದು ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
2026ರ ಆಗಸ್ಟ್ 17ರಿಂದ ಒಂದು ವರ್ಷದ ಅವಧಿಗೆ ಕರ್ನಾಟಕದಲ್ಲಿ ‘ಅನಾಲಾಗ್ / ನಾನ್-ಡೈರಿ ಪನೀರ್’ ಹೆಸರಿನಲ್ಲಿ ಇಂತಹ ಉತ್ಪನ್ನಗಳನ್ನು ತಯಾರಿಸುವುದು, ಸಂಗ್ರಹಿಸುವುದು, ಸಾಗಣೆ ಮಾಡುವುದು, ವಿತರಿಸುವುದು ಹಾಗೂ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.
ಇನ್ನು ಮುಂದೆ ಹಾಲಿನಿಂದ ತಯಾರಿಸಿದ ನೈಜ ಪನೀರ್ಗೆ ಮಾತ್ರ ‘ಪನೀರ್’ ಎಂಬ ಹೆಸರನ್ನು ಬಳಸಬೇಕು. ಅನಾಲಾಗ್ ಅಥವಾ ನಾನ್-ಡೈರಿ ಪದಾರ್ಥಗಳಿಂದ ತಯಾರಿಸಿದ ಉತ್ಪನ್ನಗಳನ್ನು ‘ಪನೀರ್’ ಎಂದು ಬಿಂಬಿಸಿ ಮಾರಾಟ ಮಾಡುವುದು ಕಂಡುಬಂದರೆ, ಸಂಬಂಧಪಟ್ಟ ಆಹಾರ ತಯಾರಕರು, ಮಾರಾಟಗಾರರು ಹಾಗೂ ಆಹಾರ ವ್ಯವಹಾರ ನಿರ್ವಾಹಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಇಲಾಖೆ ಎಚ್ಚರಿಸಿದೆ.










