ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ (ಆ.05) : ಪ್ರಸಕ್ತ ವರ್ಷದಿಂದಲೇ ಚಿತ್ರದುರ್ಗದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಪ್ರಾರಂಭಿಸಬೇಕು, ಜಿ.ಆರ್. ಹಳ್ಳಿಯಲ್ಲಿನ ಸ್ನಾತಕೋತ್ತರ ಕೇಂದ್ರದಲ್ಲಿನ ಕಟ್ಟಡವನ್ನು ಹಸ್ತಾಂತರಿಸಿಕೊಂಡು, ಅಗತ್ಯ ಮೂಲಭೂತ ಸೌಕರ್ಯ ಕಾಮಗಾರಿ ಪ್ರಾರಂಭಿಸಬೇಕು, ಡಿಎಂಎಫ್ ನಿಧಿಯಡಿ ಅನುದಾನ ಭರಿಸುವಂತೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರು ಹಾಗೂ ಸಂಸದರಾದ ಎ. ನಾರಾಯಣಸ್ವಾಮಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾದ ದಿಶಾ ಸಮಿತಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರಿ ಮೆಡಿಕಲ್ ಕಾಲೇಜು ಪ್ರಗತಿ ಬಗ್ಗೆ ಮಾಹಿತಿ ನೀಡಿದ ವಿಶೇಷಾಧಿಕಾರಿ ಡಾ. ಯುವರಾಜ್ ಅವರು, ಪ್ರಸಕ್ತ ವರ್ಷದಿಂದಲೇ ವೈದ್ಯಕೀಯ ವ್ಯಾಸಂಗಕ್ಕಾಗಿ ವಿದ್ಯಾರ್ಥಿಗಳ ಪ್ರವೇಶಾತಿ ಪ್ರಾರಂಭವಾಗುತ್ತಿದೆ, ತಾತ್ಕಾಲಿಕವಾಗಿ ಜಿ.ಆರ್. ಹಳ್ಳಿಯಲ್ಲಿನ ದಾವಣಗೆರೆ ವಿವಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಆವರಣದಲ್ಲಿನ ಕಟ್ಟಡದಲ್ಲಿ ಪ್ರಾರಂಭಿಸಲಾಗುತ್ತಿದ್ದು, ಆದರೆ ಕಟ್ಟಡ ಇದುವರೆಗೂ ಹಸ್ತಾಂತರವಾಗಿಲ್ಲ, ಅಲ್ಲದೆ ಸರ್ಕಾರಿದಿಂದ ಅಗತ್ಯ ಅನುದಾನ ಬಿಡುಗಡೆಯೂ ಆಗಬೇಕಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು, ಇದುವರೆಗೂ ಕಟ್ಟಡವನ್ನು ಹಸ್ತಾಂತರ ಮಾಡಿಕೊಳ್ಳದೇ ಇರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ವೈದ್ಯಕೀಯ ವ್ಯಾಸಂಗಕ್ಕೆ ಚಿತ್ರದುರ್ಗ ಕಾಲೇಜನ್ನು ಆಯ್ಕೆ ಮಾಡಿಕೊಂಡು ಜಿಲ್ಲೆಗೆ ಬರುವ ವಿದ್ಯಾರ್ಥಿಗಳು ಬೇಸರ ಮಾಡಿಕೊಳ್ಳುವಂತಾಗಬಾರದು, ಕಾಲೇಜಿಗೆ ಅಗತ್ಯ ಪೀಠೋಪಕರಣ, ಬೋಧನಾ ಸಾಮಗ್ರಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಪಡೆಯಲು ಕೂಡಲೆ ಕ್ರಮ ಕೈಗೊಳ್ಳಬೇಕು, ಅಗತ್ಯ ಅನುದಾನವನ್ನು ಡಿಎಂಎಫ್ ನಿಧಿಯಡಿ ಬಿಡುಗಡೆ ಮಾಡುವಂತೆ ಈಗಾಗಲೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ, ಈ ನಿಟ್ಟಿನಲ್ಲಿ ವಿಶೇಷಾಧಿಕಾರಿಗಳು ವಿಳಂಬ ಮಾಡದೆ, ಎಲ್ಲ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.
ನೀರು ಸಂಗ್ರಹಗಾರಗಳ ಸ್ವಚ್ಛತೆ ರಿಜಿಸ್ಟರ್ ನಿರ್ವಹಿಸಿ : ಕವಾಡಿಗರ ಹಟ್ಟಿಯಲ್ಲಿ ಜರುಗಿದ ಕಲುಷಿತ ನೀರು ಪೂರೈಕೆ ಪ್ರಕರಣವನ್ನು ಗಮನಿಸಿದಾಗ, ಕೆಳಹಂತದ ಸಿಬ್ಬಂದಿಗಳು, ಉನ್ನತ ಅಧಿಕಾರಿಗಳು ಜನಪ್ರತಿನಿಧಿಗಳು ಎಲ್ಲರೂ ಇದಕ್ಕೆ ಜವಾಬ್ದಾರರಾಗುತ್ತಾರೆ. ಇಂತಹ ಅನಾಹುತಗಳು ಸಂಭವಿಸಿದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ನೀರಿನ ಸಂಗ್ರಹಗಾರಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು ಎಂದು ಸರ್ಕಾರ ಹಲವು ಬಾರಿ ನಿರ್ದೇಶನ ನೀಡಿದ್ದರೂ, ಇದರ ಬಗ್ಗೆ ನಿರ್ಲಕ್ಷ್ಯ ತೋರಿರುವುದು ಕಂಡುಬರುತ್ತದೆ. ಹೀಗಾಗಿ ನಗರ, ಗ್ರಾಮೀಣ ಸೇರಿದಂತೆ ಎಲ್ಲ ಪ್ರದೇಶಗಳ ಮೇಲ್ಮಟ್ಟದ ಹಾಗೂ ನೆಲಮಟ್ಟದ ಜಲ ಸಂಗ್ರಹಾಗಾರಗಳನ್ನು ಸ್ವಚ್ಛಗೊಳಿಸುವ ಕುರಿತು ಸಂಬಂಧಪಟ್ಟವರು ಡೈರಿ, ರಿಜಿಸ್ಟರ್ ನಿರ್ವಹಣೆ ಮಾಡಬೇಕು. ಟ್ಯಾಂಕ್‍ಗಳನ್ನು ಸ್ವಚ್ಛಗೊಳಿಸಿದ ಸಿಬ್ಬಂದಿ, ಪರಿಶೀಲಿಸಿದ ಅಧಿಕಾರಿಗಳು ಈ ರಿಜಿಸ್ಟರ್‍ಗೆ ಸಹಿ ಮಾಡಿ ಖಚಿತಪಡಿಸುವಂತಾಗಬೇಕು. ಜಿಲ್ಲೆಯಲ್ಲಿನ ಎಲ್ಲ ಜಲಸಂಗ್ರಹಾಗಾರಗಳನ್ನು ಸ್ವಚ್ಛಗೊಳಿಸುವುದನ್ನು ಅಭಿಯಾನ ರೂಪದಲ್ಲಿ ಕೈಗೊಂಡು, ರಾಜ್ಯಕ್ಕೆ ಮಾದರಿಯಾಗಬೇಕು ಎಂದು ಸಚಿವರು ಸೂಚನೆ ನೀಡಿದರು.
ಜಲಜೀವನ ಮಿಷನ್ ಕಾಮಗಾರಿ ಪರಿಶೀಲನೆ :
ಜಿಲ್ಲೆಯಲ್ಲಿ ಮನೆ ಮನೆಗೆ ಶುದ್ಧ ನೀರು ಪೂರೈಸುವ ಜಲಜೀವನ್ ಮಿಷನ್ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳು ಸಮರ್ಪಕವಾಗಿ ನಡೆಯುತ್ತಿಲ್ಲ, ಗುಣಮಟ್ಟದ ಪೈಪ್‍ಗಳನ್ನು ಬಳಸುತ್ತಿಲ್ಲ ಎಂಬುದಾಗಿ ದೂರುಗಳು ಕೇಳಿಬಂದಿವೆ. ಪೈಪ್‍ಲೈನ್, ಸ್ಟ್ಯಾಂಡ್ ಪೋಸ್ಟ್ ಟ್ಯಾಪ್, ಒಹೆಚ್‍ಟಿ, ರೈಸಿಂಗ್ ಮೇನ್ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಹಲವು ಬಾರಿ ಸೂಚನೆ ನೀಡಿದ್ದರೂ, ಅಧಿಕಾರಿಗಳು ಗಮನ ಹರಿಸಿಲ್ಲ, ಹೀಗಾಗಿ ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆ ಕಾಮಗಾರಿಗೆ ಸಂಬಂಧಿಸಿದಂತೆ ಸಮಗ್ರ ಪರಿಶೀಲನೆ ನಡೆಸಿ, ಫೋಟೋ ಸಹಿತ ವರದಿಯನ್ನು ಸಲ್ಲಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಸಮಾಧಾನ, ಸಭೆ ಮುಂದೂಡಿಕೆ :
ದಿಶಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಿರ್ಮಿತಿ ಕೇಂದ್ರ, ಲೀಡ್ ಬ್ಯಾಂಕ್ ವ್ಯವಸ್ಥಾಪಕರು, ಬೆಸ್ಕಾಂ, ಕೆಪಿಟಿಸಿಎಲ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸೇರಿದಂತೆ ಕೆಲವು ಇಲಾಖೆ ಅಧಿಕಾರಿಗಳು ನೀಡಿದ ಅಪೂರ್ಣ ವರದಿ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಸಚಿವರು, ಹಲವು ಬಾರಿ ಸೂಚನೆ ನೀಡಿದರೂ, ಅಧಿಕಾರಿಗಳು ಸಭೆಗೆ ಸಮರ್ಪಕ ವರದಿ ಸಲ್ಲಿಸುತ್ತಿಲ್ಲ. ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡುತ್ತಿಲ್ಲ.
ಹೀಗಾದರೆ ನಾವು ಜನಪ್ರತಿನಿಧಿಗಳು ನಮಗೆ ಮತ ಹಾಕಿದವರ ಋಣ ತೀರಿಸಲು ಆದೀತೆ?, ಎಂಬುದಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕೇಂದ್ರ ಸಚಿವರು, ದಿಶಾ ಪ್ರಗತಿ ಪರಿಶೀಲನಾ ಸಭೆಯನ್ನು ಇನ್ನೊಂದು ದಿನ ನಡೆಸುತ್ತೇನೆ, ಆಗಲಾದರೂ ಸರಿಯಾದ ಮಾಹಿತಿ ಹಾಗೂ ವರದಿಯೊಂದಿಗೆ ಬನ್ನಿ ಎಂದು ಸೂಚಿಸಿ, ದಿನಾಂಕ ನಿಗದಿಪಡಿಸುವಂತೆ ಸೂಚಿಸಿ, ಸಭೆಯಿಂದ ಹೊರ ನಡೆದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ, ಜಿ.ಪಂ. ಉಪಕಾರ್ಯದರ್ಶಿ ತಿಮ್ಮಪ್ಪ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.