ಗುಬ್ಬಿ: ಕಾಂಗ್ರೆಸ್ ಶಾಸಕರಿಗೆ ಮಾತ್ರ ಅನುದಾನ ಎಂಬ ಸಲ್ಲದ ಆರೋಪ ಮಾಡುವ ವಿರೋಧಪಕ್ಷ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ. ಎಲ್ಲಾ ಶಾಸಕರಿಗೂ ಹತ್ತು ಕೋಟಿ ಅನುದಾನ ನೀಡಿ ಅಬಿವೃದ್ದಿ ಕೆಲಸಕ್ಕೆ ಮುನ್ನುಡಿ ಹಾಡಿದ ಸರ್ಕಾರ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಸಮರ್ಥಿಸಿಕೊಂಡರು.
ತಾಲ್ಲೂಕಿನ ಮುದಿಗೆರೆ ಗ್ರಾಮದಲ್ಲಿ ಒಟ್ಟು 3 ಕೋಟಿ ರೂಗಳ ನಾಲ್ಕು ಗ್ರಾಮದ ಸಿಸಿ ರಸ್ತೆ ಕಾಮಗಾರಿಗೆ ಸಾಂಕೇತಿಕವಾಗಿ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ಗೂಬೆ ಕೂರಿಸುವ ಕೆಲಸ ಮಾಡುವ ವಿರೋಧ ಪಕ್ಷ ಅಪಾದನೆ ಮಾಡುವುದೇ ದೊಡ್ಡ ಕೆಲಸ ಎಂದು ಕೊಂಡಿದ್ದಾರೆ. ನನ್ನ ಕ್ಷೇತ್ರದಲ್ಲೇ ಈಗಾಗಲೇ 15 ರಸ್ತೆ ಕಾಮಗಾರಿ ಏಕಕಾಲದಲ್ಲಿ ನಡೆದಿದೆ. ಸಲ್ಲದ ಆರೋಪ ಮಾಡುವುದು ಬಿಟ್ಟು ಅಭಿವೃದ್ದಿ ಕೆಲಸಗಳಿಗೆ ಸಾಥ್ ನೀಡುವುದು ಸೂಕ್ತ ಎಂದು ಟಾಂಗ್ ಕೊಟ್ಟರು.
ಕಳೆದ ಆರು ವರ್ಷಗಳಿಂದ ಬಡವರಿಗೆ ಮನೆ ನಿರ್ಮಾಣಕ್ಕೆ ವಸತಿ ಯೋಜನೆಯ ಕಾರ್ಯಕ್ರಮ ಜಾರಿಯಾಗಿಲ್ಲ. ಈಗ ಸಚಿವರ ಜೊತೆ ಮಾತನಾಡಿ ಮನವಿ ಮಾಡಿದ ಹಿನ್ನಲೆ 4 ಸಾವಿರ ಮನೆಗಳನ್ನು ಫೆಬ್ರವರಿ ಅಂತ್ಯದೊಳಗೆ ಮಂಜೂರು ಮಾಡಲಿದ್ದಾರೆ. ಯೂನಿಟ್ ಬೆಲೆ ಮೊದಲು 1.70 ಲಕ್ಷ ನೀಡುತ್ತಿದ್ದು, ಈಗ ಇದನ್ನು ಪರಿಶೀಲಿಸಿ ಹೆಚ್ಚುವರಿಯಾಗಿ 3 ಲಕ್ಷ ನೀಡುವ ಆದೇಶದ ಜೊತೆ ಮನೆಗಳನ್ನು ನೀಡಲಿದ್ದಾರೆ. ಎಲ್ಲಾ ಗ್ರಾಮ ಪಂಚಾಯಿತಿಗೆ ಮನೆಗಳನ್ನು ಹಂಚಲಾಗುವುದು ಎಂದು ಭರವಸೆ ನೀಡಿದರು.
ಸಾಮಾಜಿಕ ಜಾಲತಾಣದಲ್ಲಿ ನನ್ನ ಖಾತೆಗಳು ಯಾವುದೂ ಇಲ್ಲ. ಫೇಸ್ ಬುಕ್, ವಾಟ್ಸಪ್, ಟ್ವಿಟ್ಟರ್ ಹೀಗೆ ಯಾವ ಆ್ಯಪ್ ಬಳಸದ ನಾನು ಯಾವ ಅಧಿಕೃತ ಖಾತೆ ಹೊಂದಿಲ್ಲ. ಸಾಮಾಜಿಕ ಜಾಲತಾಣದ ಬಳಕೆ ಇಲ್ಲದ ಮೇಲೆ ಹೇಗೆ ಬೇರೆಯವರನ್ನು ನಿಂದಿಸಿ ಪೋಸ್ಟ್ ಮಾಡಲು ಸಾಧ್ಯ ಎಂಬ ಪ್ರಶ್ನೆ ಕೇಳಿದ ಶಾಸಕರು ಕೆಎಸ್ ಆರ್ ಟಿಸಿ ಬಸ್ ನಿಲ್ದಾಣಕ್ಕೆ 9 ಕೋಟಿ ಮಂಜೂರು ಅಗಲಿದ್ದು ಅತ್ಯಾಧುನಿಕ ಬಸ್ ಸ್ಟ್ಯಾಂಡ್ ನಿರ್ಮಾಣ ಆಗಲಿದೆ. ಜೊತೆಗೆ 14 ಕೋಟಿ ಬಸ್ ಡಿಪೋ ಕೂಡಾ ನಿರ್ಮಾಣ ಆಗಲಿದೆ ಎಂದರು.
ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ ಬಗ್ಗೆ ಪ್ರಸ್ತಾಪಿಸಿ ಒತ್ತಡ ಕೆಲಸ ಮಾಡುತ್ತಿರುವುದು ಸರಿಯಷ್ಟೇ ಆದರೆ ಸರ್ಕಾರ ಅವರ ಬೇಡಿಕೆಗೆ ಸ್ಪಂದಿಸಿ ಮುಷ್ಕರ ಕೂಡಲೇ ಅಂತ್ಯ ಮಾಡಲಿದೆ ಎಂಬ ವಿಶ್ವಾಸವಿದೆ ಎಂದ ಅವರು ಮುದಿಗೆರೆ ಗ್ರಾಮದಲ್ಲಿ 1.50 ಕೋಟಿ ರೂಗಳ ಸಿಸಿ ರಸ್ತೆ ಹಾಗೂ ಬಾಕ್ಸ್ ಚರಂಡಿ, ಹೇರೂರು ವಸತಿ ಶಾಲೆಯ ರಸ್ತೆಗೆ 25 ಲಕ್ಷ, ರಂಗನಾಥಪುರ ಗ್ರಾಮದಲ್ಲಿ 75 ಲಕ್ಷ ರೂಗಳ ಸಿಸಿ ರಸ್ತೆ ಹಾಗೂ ಎನ್.ನಂದಿಹಳ್ಳಿ ಗ್ರಾಮದಲ್ಲಿ 50 ಲಕ್ಷ ರೂಗಳ ಸಿಸಿ ರಸ್ತೆಗೆ ಒಂದು ಚಾಲನೆ ನೀಡಲಾಗಿದೆ. ಹೀಗೆ ಶೀಘ್ರದಲ್ಲಿ ಎಲ್ಲಾ ಗ್ರಾಮಗಳಿಗೆ ರಸ್ತೆ ಸೌಲಭ್ಯ ಒದಗಿಸಲು ಬದ್ಧನಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಎಂ.ಎಚ್.ಪಟ್ಟಣ ಗ್ರಾಪಂ ಅಧ್ಯಕ್ಷ ಎಸ್.ಜೆ.ಯೋಗೀಶ್,ಉಪಾಧ್ಯಕ್ಷರಾದ ಭಾಗ್ಯಮ್ಮ ಪಾಂಡುರಂಗಯ್ಯ, ಸದಸ್ಯರಾದ ಕೃಷ್ಣಮೂರ್ತಿ, ಶಿವಣ್ಣ, ಮಹೇಂದ್ರ ಕುಮಾರ್, ಮುಖಂಡರಾದ ಪಟೇಲ್ ದಿನಾಕರ್ ಮೂರ್ತಿ, ರಾಜಣ್ಣ, ನರಸಿಯಪ್ಪ, ಚೇಳೂರು ಶಿವನಂಜಪ್ಪ, ಪುಟ್ಟರಾಜು, ಯಶ್ವಂತ್, ಯತೀಶ್, ಪುಟ್ಟರಾಜು, ನರಸಿಂಹಮೂರ್ತಿ, ದೇವೇಗೌಡ, ಗುತ್ತಿಗೆದಾರ ಮದುವೆಮನೆ ಕುಮಾರ್, ಪಂಚಾಯತ್ ರಾಜ್ ಎಇಇ ಚಂದ್ರಶೇಖರ್, ಜೆಇ ಗೋಪಿನಾಥ್, ಇಂಜಿನಿಯರ್ ಮಂಜುನಾಥ್, ಪ್ರಭಾರ ಪಿಡಿಓ ಕೆ.ಎಂ.ಶೇಖರ್ ಇತರರು ಇದ್ದರು.