Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

48 ಗಂಟೆಗಳಿಗೂ ಹೆಚ್ಚು ಕಾಲ ನ್ಯಾಯಾಂಗ ಬಂಧನದಲ್ಲಿದ್ದ ಸರ್ಕಾರಿ ನೌಕರರು ಸ್ವಯಂಚಾಲಿತವಾಗಿ ಅಮಾನತು: ಸುಪ್ರೀಂ ಕೋರ್ಟ್ ಮಹತ್ವದ ಆದೇಶ

---Advertisement---

ನವದೆಹಲಿ: ಬಂಧನಕ್ಕೊಳಗಾಗಿ 48 ಗಂಟೆಗಳಿಗಿಂತ ಹೆಚ್ಚು ಕಾಲ ನ್ಯಾಯಾಂಗ ಬಂಧನದಲ್ಲಿರುವ ಯಾವುದೇ ಸರ್ಕಾರಿ ನೌಕರನನ್ನು ಸ್ವಯಂಚಾಲಿತವಾಗಿ ಅಮಾನತುಗೊಳಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ. ಇದಕ್ಕೆ ಯಾವುದೇ ಪ್ರತ್ಯೇಕ ಆದೇಶದ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಬಿಹಾರದ ಸಮಸ್ತಿಪುರದ ಸದರ್ ಆಸ್ಪತ್ರೆಯ ಆಡಳಿತಾಧಿಕಾರಿ ವಿಶ್ವಾಜಿತ್ ಸಿಂಗ್ ಎಂಬಾತನ ಜಾಮೀನು ಮರುಸ್ಥಾಪಿಸುವ ವಿಚಾರಣೆಯ ವೇಳೆ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನ್ಮೋಹನ್ ಅವರಿದ್ದ ಪೀಠ ಈ ಮಹತ್ವದ ಅವಲೋಕನ ಮಾಡಿದೆ.

ಪ್ರಕರಣದ ಹಿನ್ನೆಲೆ:

ಗುತ್ತಿಗೆ ಕಾರ್ಮಿಕನೊಬ್ಬನ 36,421 ರೂ.ಗಳ ಬಾಕಿ ವೇತನವನ್ನು ಬಿಡುಗಡೆ ಮಾಡಲು ವಿಶ್ವಾಜಿತ್ ಸಿಂಗ್ 4,000 ರೂ. ಲಂಚ ಕೇಳಿದ ಆರೋಪದ ಮೇಲೆ 2025ರಲ್ಲಿ ಬಂಧನಕ್ಕೊಳಗಾಗಿದ್ದ. ಈತ ಸುಮಾರು 15 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದ. ಕೆಳಹಂತದ ನ್ಯಾಯಾಲಯ ಈತನಿಗೆ ಜಾಮೀನು ಮಂಜೂರು ಮಾಡಿತ್ತು. ಆದರೆ, ದೂರುದಾರರು ಇದನ್ನು ಪ್ರಶ್ನಿಸಿ ಪಟ್ನಾ ಹೈಕೋರ್ಟ್ ಮೆಟ್ಟಿಲೇರಿದ್ದರು. 2026ರ ಜುಲೈ 1ರಂದು ಪಟ್ನಾ ಹೈಕೋರ್ಟ್ ಆರೋಪಿಯ ಜಾಮೀನನ್ನು ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಆತ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ.

ಅದೇ ಹುದ್ದೆಗೆ ಮರುನೇಮಕ ಮಾಡಿದ್ದಕ್ಕೆ ಕೋರ್ಟ್ ಅಸಮಾಧಾನ:

ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಪಟ್ನಾ ಹೈಕೋರ್ಟ್ ಆದೇಶವನ್ನು ಬದಿಗೆ ಸರಿಸಿ ಆರೋಪಿಗೆ ಮರಳಿ ಜಾಮೀನು ಮಂಜೂರು ಮಾಡಿದೆ. ಆದರೆ, 15 ದಿನಗಳ ಕಾಲ ಜೈಲಿನಲ್ಲಿದ್ದ ಅಧಿಕಾರಿಯ ಅಮಾನತು ಆದೇಶವನ್ನು ರದ್ದುಗೊಳಿಸಿ, ಮತ್ತೆ ಅದೇ ಆಸ್ಪತ್ರೆಯಲ್ಲಿ ಅದೇ ಹುದ್ದೆಗೆ ನೇಮಿಸಿರುವ ಬಿಹಾರ ಸರ್ಕಾರದ ಕ್ರಮವನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ಇದು ನಿಜಕ್ಕೂ ಆಘಾತಕಾರಿ ಸಂಗತಿ. 48 ಗಂಟೆಗೂ ಹೆಚ್ಚು ಕಾಲ ಕಸ್ಟಡಿಯಲ್ಲಿದ್ದ ಸರ್ಕಾರಿ ನೌಕರ ಸ್ವಯಂಚಾಲಿತವಾಗಿ ಅಮಾನತುಗೊಳ್ಳುತ್ತಾನೆ (Deemed Suspension). ಆದರೆ, ಆತನನ್ನು ಮತ್ತೆ ಅದೇ ಆಸ್ಪತ್ರೆಯಲ್ಲಿ ಅದೇ ಹುದ್ದೆಗೆ ನೇಮಿಸಿರುವುದು ಆಶ್ಚರ್ಯ ತರಿಸಿದೆ” ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಬಗ್ಗೆ ಕಾನೂನುಬದ್ಧ ಕ್ರಮ ಕೈಗೊಂಡು ಪರಿಶೀಲಿಸುವಂತೆ ಬಿಹಾರ ಸರ್ಕಾರಕ್ಕೆ ಸೂಚನೆ ನೀಡಿದೆ.

ಲಂಚದ ಮೊತ್ತ ಚಿಕ್ಕದಾಗಿದೆ ಎಂಬ ಕಾರಣಕ್ಕೆ ಜಾಮೀನು ರದ್ದುಗೊಳಿಸುವುದು ಸರಿಯಲ್ಲ. ಆರೋಪಿಯ ಅಪರಾಧದ ಹಿನ್ನೆಲೆ ಅಥವಾ ಪ್ರಕರಣದ ಗಂಭೀರತೆಯನ್ನು ಮಾತ್ರ ಪರಿಗಣಿಸಿ ಜಾಮೀನು ನಿರಾಕರಿಸಬಹುದು ಎಂದು ನ್ಯಾಯಾಲಯ ಇದೇ ವೇಳೆ ಸ್ಪಷ್ಟಪಡಿಸಿದೆ.

Join WhatsApp

Join Now

Join Telegram

Join Now