ಚಿತ್ರದುರ್ಗ, (ಏ.22) : ರಾಜ್ಯದಲ್ಲಿ ಮಂಜೂರಾದ 7.50 ಲಕ್ಷ ಹುದ್ದೆಗಳಲ್ಲಿ 5.40 ಲಕ್ಷಗಳು ಹುದ್ದೆಗಳು ಭರ್ತಿ ಇವೆ. ಸರ್ಕಾರಿ ನೌಕರರು ಖಾಲಿ ಹುದ್ದೆಗಳನ್ನು ಸರಿದೂಗಿಸಿಕೊಂಡು ಅಧಿಕ ಕೆಲಸ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಚಿತ್ರದುರ್ಗ
ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಕೆ.ಮಂಜುನಾಥ್ ಹೇಳಿದರು.
ನಗರದ ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘಾದ ಜಿಲ್ಲಾ ಘಟಕದ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾ ಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಭಾಗವಹಿಸಿ ಅವರು ಮಾತನಾಡಿದರು.
ವಾಡಿಕೆಯಂತೆ ಕ್ರೀಡಾಕೂಟ ಆಯೋಜನೆ ಮಾಡಲಾಗಿದೆ. ಕಚೇರಿ ಒತ್ತಡಗಳಿಂದ ಮುಕ್ತವಾಗಿ ನೌಕರರು ಕ್ರೀಡಾಕೂಟದಲ್ಲಿ ಭಾಗವಹಿಸಬೇಕು. ಸರ್ಕಾರ ಜಿಲ್ಲಾ ಮಟ್ಟದ ಕ್ರೀಡಾಕೂಟ ಆಯೋಜನೆಗೆ 5 ಲಕ್ಷ ರೂಪಾಯಿ ಅನುದಾನ ನೀಡಿದೆ.
ರಾಜ್ಯ ಮಟ್ಟದ ಆಯೋಜನೆಗೆ ರೂ. 2 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಧಾರವಾಡ ಹಾಗೂ ದಾವಣಗೆರೆಯಲ್ಲಿ ರಾಜ್ಯಮಟ್ಟದ ಕ್ರೀಡಾಕೂಟವನ್ನು ಯಶಸ್ವಿಯಾಗಿ ಆಯೋಜನೆ ಮಾಡಲಾಗಿದೆ.
ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಕ್ಷರಿ ನೌಕರರ ಸಂಕಷ್ಟಕ್ಕೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಹಬ್ಬದ ಮುಂಗಡ ಹೆಚ್ಚಿಸುವ, ಅನಾಮಧೇಯ ಪತ್ರಗಳಿಂದ ನೌಕರರಿಗೆ ಆಗುವ ತೊಂದರೆಗಳನ್ನು ತಪ್ಪಿಸಲು ಸರ್ಕಾರದ ಸೂಕ್ತ ಆದೇಶ ಹೊರಡಿಸುವಲ್ಲಿ ರಾಜ್ಯಾಧ್ಯಕ್ಷರ ಪಾತ್ರ ಪ್ರಮುಖವಾಗಿದೆ. ಸಾಮಾಜಿಕ ಜಾಲತಣಗಳ ಮೂಲಕ ಆದೇಶಗಳನ್ನು ಲಭಿಸುವಂತೆ ಮಾಡಿದ್ದಾರೆ. ಎನ್.ಪಿ.ಎಸ್. ರದ್ದತಿಗೆ ಸಂಘದ ಹೋರಾಟ ಮುಂದುವರಿಯಲಿದೆ ಎಂದರು.
ಸರ್ಕಾರದ ಏಳನೇ ವೇತನ ಆಯೋಗ ಹಾಗೂ ಕೇಂದ್ರ ಸರ್ಕಾರದ ನೌಕರರ ಸರಿ ಸಮಾನ ವೇತನ ನೀಡಲು ಸಮ್ಮತಿಸಿದೆ. ನೌಕರರು ಭಕ್ತಿ ಪೂರ್ವಕವಾಗಿ ಸಾರ್ವಜನಿಕ ಸೇವೆಯ ಕೆಲಸವನ್ನು ಮಾಡಬೇಕು ಎಂದರು.
ಸಮಾರಂಭದಲ್ಲಿ ಕ್ರೀಡೆಗಳ ಚಾಲನೆಯ ಸೂಚಕವಾಗಿ ಪಾರಿವಾಳಗಳನ್ನು ಹಾರಿಬಿಡಲಾಯಿತು. ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಸಾಧನೈಗದ ನೌಕರರು ಕ್ರೀಡಾಜ್ಯೋತಿ ಹಿಡಿದು ಮೈದಾನಕ್ಕೆ
ಓಡಿ ಬಂದು ಕ್ರೀಡಾಜ್ಯೋತಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿದರು.
ನೌಕರರ ಸಂಘದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ನೌಕರರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ನೌಕರರ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ನೀಡುವಂತೆ ಮನವಿ ಪತ್ರ ಸಲ್ಲಿಸಲಾಯಿತು.