ರೈತರ ಕೃಷಿ ಉತ್ಪನ್ನ ಹಾಗೂ ಆದಾಯ ದ್ವಿಗುಣಗೊಳಿಸಲು ಸರ್ಕಾರದ ನೆರವು : ಸಚಿವ ಎ.ನಾರಯಣ ಸ್ವಾಮಿ

suddionenews
2 Min Read

ಚಿತ್ರದುರ್ಗ, (ಮೇ.31) : ದೇಶದ ರೈತರ ಕೃಷಿ ಉತ್ಪನ್ನ ಹಾಗೂ ಆದಾಯವನ್ನು ದ್ವಿಗುಣಗೊಳಿಸಲು ಕೇಂದ್ರ ಸರ್ಕಾರ ಅಗತ್ಯ ನೆರವು ಹಾಗೂ ಸಹಕಾರ ನೀಡುತ್ತಿದೆ. ಇದರ ಅಂಗವಾಗಿ ಕೃಷಿ ಸಮ್ಮಾನ್ ಯೋಜನೆಯಡಿ ರೈತರ ಖಾತೆಗೆ ನೇರವಾಗಿ ಹಣ ಜಮೆ ಮಾಡಲಾಗುತ್ತಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣ ಸ್ವಾಮಿ ಹೇಳಿದರು.

ನಗರದ ತರಾಸು ರಂಗಮಂದಿರದಲ್ಲಿ ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಮಂತ್ರಾಲಯ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ ಆಯೋಜಿಸಲಾದ ಗರೀಬ್ ಕಲ್ಯಾಣ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಸರ್ಕಾರದ ಯೋಜನೆಗಳು ಜನರಿಗೆ ಎಷ್ಟರ ಮಟ್ಟಿಗೆ ತಲುಪಿವೆ. ಯೋಜನೆ ಲಾಭ ಪಡೆದ ಫಲಾನುಭವಿಗಳ ಜೀವನದಲ್ಲಾದ ಬದಲಾವಣೆಗಳು ಹಾಗೂ ಯೋಜನೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಪ್ರಧಾನ ಮಂತ್ರಿಗಳು ಫಲಾನುಭವಿಗಳಿಂದಿಗೆ ನೇರವಾಗಿ ಸಂವಾದ ನಡೆಸುತ್ತಿದ್ದಾರೆ.

ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಮುಕ್ತ ಚರ್ಚೆಯಾಗಬೇಕಿದೆ. ದೇಶದ ಬೆಳವಣಿಗೆಯಲ್ಲಿ ಈ ಯೋಜನೆಗಳ ಪಾತ್ರ ಏನೆಂಬುದು ಜನರಿಗೆ ತಿಳಿಯಬೇಕು. ನರೇಂದ್ರ ಮೋದಿಯವರು ಕೋವಿಡ್ ಸಂದರ್ಭದಲ್ಲಿ ಧೃಡವಾಗಿ ದೇಶವನ್ನು ಮುನ್ನಡೆಸಿದ್ದಾರೆ. ಬಿ.ಪಿ.ಎಲ್ ಪಡಿತರ ಹೊಂದಿರುವ 80 ಕೋಟಿ ಜನರಿಗೆ ಉಚಿತವಾಗಿ ಪಡಿತರ ವಿತರಣೆ ಮಾಡಲಾಗಿದೆ.

ಕೋವಿಡ್ ಅಲೆಗಳಿಂದಾಗಿ ವಿಶ್ವವೇ ತಲ್ಲಣಗೊಂಡಿದೆ. ದೇಶದಲ್ಲಿ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡಿಲಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ, ಉಜ್ವಲ, ಮಾತೃ ವಂದನ,ಪೋಷಣ ಅಭಿಯಾನಗಳು ನಿರೀಕ್ಷಿತ ಮಟ್ಟದಲ್ಲಿ ಫಲಾನುಭವಿಗಳಿಗೆ ತಲುಪಿವೆ.‌

ಸ್ವಚ್ಛ ಭಾರತ್ ಮಿಷನ್ ಅಡಿ ಬಡವರ ಮನೆ ಹಾಗೂ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಜಲ ಜೀವನ್ ಮಿಷನ್ ಅಡಿ ಪ್ರತಿ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಆಯುಷ್ಮಾನ್ ಭಾರತ ಯೋಜನೆಯಡಿ ಪ್ರತಿ ಕುಟುಂಬಗಳಿಗೆ ವಾರ್ಷಿಕ 5 ಲಕ್ಷ ರೂಪಾಯಿ ಆರೋಗ್ಯ ಸೌಲಭ್ಯ ನೀಡಲಾಗಿದೆ.

ಸ್ಟಾರ್ಟ್ ಅಪ್ ಹಾಗೂ ಮುದ್ರಾ ಯೋಜನೆಗಳ ಮೂಲಕ ಯುವ ಜನರ ಕನಸನ್ನು ಸಕಾರ ಮಾಡಿ, ಸ್ವಂತ ಉದ್ದಿಮೆ ಆರಂಭಿಸಲು ಸಾಲ ಸೌಲಭ್ಯ ನೀಡಲಾಗಿದೆ.ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಯೋಜನೆಗಳ ಕುರಿತಾದ ಮಾಹಿತಿ ಪ್ರದರ್ಶನ ಏರ್ಪಡಿಸಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ‌ ನರೇಂದ್ರ ಮೋದಿಯವರು 2014 ರಿಂದ ಪ್ರಧಾನ ಮಂತ್ರಿಯಾಗಿ ಅಧಿಕಾರಕ್ಕೆ ಬಂದ ಮೇಲೆ ಬಡವರು ಹಾಗೂ ರೈತರಿಗೆ 13 ಪ್ರಮುಖ ಯೋಜನೆಗಳನ್ನು ಜಾರಿ ಮಾಡಿದ್ದಾರೆ.

ಮೋದಿಯವರ ಆಡಳಿತಕ್ಕೆ 8 ವರ್ಷಗಳಾಗಿದೆ. ಈ ಅವಧಿಯಲ್ಲಿ ಅನೇಕ ಬದಲಾವಣೆ ದೇಶದಲ್ಲಿ ಆಗಿದೆ. ಗುಜರಾತ್ ಮುಖ್ಯ ಮಂತ್ರಿ ಹಾಗೂ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದ ಮೇಲೆ ಮೋದಿಯವರು ಒಂದು ದಿನವೂ ರಜೆ ಪಡೆದಿಲ್ಲ. ಪ್ರಧಾನಿಗಳಿಗೆ ಬಡತನದ ಅರಿವು ಇದೆ. ಹಳ್ಳಿ ಗಾಡಿನ ಮಹಿಳೆಯರು ಸೌದೆ ಬಳಸಿ ಅಡುಗೆ ಮಾಡುವಾಗ ಅನುಭವಿಸುವ ಸಂಕಷ್ಟ ತಪ್ಪಿಸಲು ಉಚಿತ ಗ್ಯಾಸ್ ವಿತರಣೆ ಮಾಡಿದರು. ಸಾಮಾಜಿಕ ಭದ್ರತಾ ಯೋಜನೆಗಳನ್ನು ಪರಿಣಾಮಕಾರಿಗಿ ಅನುಷ್ಠಾನಕ್ಕೆ ತರಲು ಜನಧನ್ ಖಾತೆ ತೆರೆದರು ಎಂದು‌ ಹೇಳಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕರಾದ ಕೆ.ಎಸ್.ನವೀನ್, ನಗರ ಸಭೆ ಅಧ್ಯಕ್ಷೆ ತಿಪ್ಪಮ್ಮ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಟಿ. ಸುರೇಶ್, ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ, ಜಿ.ಪಂ.ಸಿಇಓ ಡಾ.ನಂದಿನಿದೇವಿ, ನಗರಸಭೆ ಆಯುಕ್ತ ಹನುಂತರಾಜು, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಯೋಜನೆಗಳ ಫಲಾನುಭವಿಗಳು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *