ಬೆಂಗಳೂರು: ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಧ್ವನಿವರ್ಧಕದ ಚರ್ಚೆ ಜೋರಾಗಿದೆ. ಮಸೀದಿಗಳಲ್ಲಿನ ಧ್ವನಿವರ್ಧಕ ತೆಗೆಯದೆ ಹೋದರೆ ನಾವೂ ಸುಪ್ರಭಾತ ಹಾಕುವುದನ್ನು ನಿಲ್ಲಿಸಲ್ಲ ಎಂದು ಹಿಂದೂಪರ ಸಂಘಟನೆಗಳು ಅಭಿಯಾನ ಶುರು ಮಾಡಿವೆ. ಈ ಬೆನ್ನಲ್ಲೆ ಸರ್ಕಾರದಿಂದ ಧ್ವನವರ್ಧಕ ಸಂಬಂಧ ಹೊಸ ಮಾರ್ಗಸೂಚಿ ಹೊರಡಿಸಿದ್ದಾರೆ.
ಸರ್ಕಾರ ಹೊರಡಿಸಿರುವ ಹೊಸ ಮಾರ್ಗಸೂಚಿಯಲ್ಲಿ ಡೆಸಿಬಲ್ ಜೊತೆಗೆ ರಾತ್ರಿ 10ರಿಂದ ಬೆಳಗ್ಗೆ 6 ರ ತನಕ ಧ್ವನಿವರ್ಧಕ ಬಳಸುವಂತಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಇನ್ನಹ ಯಾವ್ಯಾವ ಪ್ರದೇಶದಲ್ಲಿ ಎಷ್ಟೆಷ್ಟು ಡೆಸಿಬಲ್ ಇರಬೇಕು ಎಂಬುದನ್ನು ಮಾರ್ಗಸೂಚಿಯಲ್ಲಿ ತಿಳಿಸಿದ್ದಾರೆ.
ಇನ್ನು ಹದಿನೈದು ದಿನಗಳೊಳಗೆ ಲೌಡ್ ಸ್ಪೀಕರ್ ಬಳಕೆಯ ವಿಚಾರವಾಗಿ ಅನುಮತಿ ಪಡೆಯಲು ಸೂಚನೆ ನೀಡಿದೆ. ಕೈಗಾರಿಕಾ ಪ್ರದೇಶದಲ್ಲಿ ಬೆಳಗ್ಗೆ 75 ಡೆಸಿಬಲ್ ರಾತ್ರಿ 70 ಡೆಸಿಬಲ್ ಸದ್ದು ಇರಬೇಕಾಗುತ್ತದೆ. ವಾಣಿಜ್ಯ ಪ್ರದೇಶದಲ್ಲಿ ಬೆಳಗ್ಗೆ 65 ಡೆಸಿಬಲ್ ಹಾಗೂ ರಾತ್ರಿ 70 ಡೆಸಿಬಲ್ ಇರಬೇಕು. ಜನವಸತಿ ಪ್ರದೇಶದಲ್ಲಿ ಬೆಳಗ್ಗೆ 55 ಇದ್ರೆ ರಾತ್ರಿ 45 ಡೆಸಿಬಲ್ ಇರಬೇಕು. ನಿಶ್ಯಬ್ಧ ವಲಯದಲ್ಲಿ ಬೆಳಗ್ಗೆ 50 ಇದ್ರೆ ರಾತ್ರಿ 40 ಇರಬೇಕು. ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಧ್ವನಿವರ್ಧಕದ ಬಳಕೆಗೆ ಅವಕಾಶ ನೀಡಲಾಗಿದೆ. ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕ ಬಳಸುವಂತಿಲ್ಲ ಎಂದು ಸೂಚನೆ ನೀಡಲಾಗಿದೆ.