ಬೆಂಗಳೂರು: ರಾಜ್ಯಾದ್ಯಂತ ಮುಂಗಾರು ಮಳೆ ಕೈಕೊಟ್ಟಿದೆ. ಈಗ ಹಿಂಗಾರು ಉತ್ತಮವಾಗುವ ಎಲ್ಲಾ ಸೂಚನೆಗಳು ಕಾಣುತ್ತಿವೆ. ಕಳೆದ ಎರಡ್ಮೂರು ದಿನದಿಂದ ರಾಜ್ಯಾದ್ಯಂತ ಜೋರು ಮಳೆಯಾಗುತ್ತಿದೆ. ಮುಂದಿನ ಇನ್ನು ಎರಡು ದಿನ ಉತ್ತಮ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನವೆಂಬರ್ 10ರ ತನಕ ಉತ್ತಮ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ತುಮಕೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಹಾಸನ, ಚಿಕ್ಕಮಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ಹಲವೆಡೆ ಮುಂದಿನ ಎರಡು ದಿನಗಳಲ್ಲಿ ಬಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ.
ನವೆಂಬರ್ 10ರಂದು ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಲಿದ್ದು, ತುಮಕೂರು, ದಾವಣಗೆರೆ, ಶಿವಮೊಗ್ಗ, ದಕ್ಷಿಣ ಕನ್ನಡ, ಮೈಸೂರು, ಮಂಡ್ಯ, ಧಾರವಾಡ ಜಿಲ್ಲೆಗಳಲ್ಲಿ ಚದುರಿದಂತೆ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ನವೆಂಬರ್ 11 ರಿಂದ 14 ರವರೆಗೆ ರಾಜ್ಯದಲ್ಲಿ ಬಹುತೇಕ ಒಣಹವೆ ಇರಲಿದ್ದು, ನವೆಂಬರ್ 15ರಿಂದ ಮತ್ತೆ ಮಳೆಯಾಗುವ ಮುನ್ಸೂಚನೆ ಇದೆ. ನವೆಂಬರ್ 15ರಂದು ದಕ್ಷಿಣ ಒಳನಾಡಿನ ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ.