ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸರ್ಕಾರಿ ಶಾಲೆಗಳ ಸಾಧನೆ ಉತ್ತಮ :  ಜಿ.ಪಂ ಸಿಇಓ ಎಂ.ಎಸ್.ದಿವಾಕರ

2 Min Read

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ,(ಮೇ.31) : ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಚಿತ್ರದುರ್ಗ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿದೆ. ಜಿಲ್ಲೆಯ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳ ಸಾಧನೆ ಉತ್ತಮವಾಗಿದೆ. ಪೋಷಕರು ನಂಬಿಕೆಯಿಟ್ಟು ಮಕ್ಕಳನ್ನು ಸರ್ಕಾರಿ ಶಾಲೆ ದಾಖಲಿಸಬಹುದು ಎಂದು ಜಿ.ಪಂ. ಸಿಇಓ ಎಂ.ಎಸ್.ದಿವಾಕರ ಹೇಳಿದರು.

ಇಲ್ಲಿನ ಮೆದೇಹಳ್ಳಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ಪ್ರತಿಭಾನ್ವಿತ ಶಿಕ್ಷಕರು ಕೆಲಸ ನಿರ್ವಹಿಸುತ್ತಿದ್ದಾರೆ. ಕಠಿಣ ಸಿಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಸರ್ಕಾರಿ ಶಾಲೆಗಳ ಶಿಕ್ಷಕ ಹುದ್ದೆಗೆ ಆಯ್ಕೆಯಾಗುತ್ತಾರೆ. ಸರ್ಕಾರದಿಂದ ಉಚಿತವಾಗಿ ಸಮವಸ್ತ್ರ, ಶೂ, ಸಾಕ್ಸ್, ಪಠ್ಯ ಪುಸ್ತಕಗಳನ್ನು ನೀಡಲಾಗುತ್ತಿದೆ. ಮಧ್ಯಾಹ್ನದ ಬಿಸಿ ಊಟ ಸಹ ನೀಡಲಾಗುತ್ತಿದೆ. ಜಿಲ್ಲೆಯ ಸಾವಿರಾರು ಶಾಲಾ ಕೊಠಡಿಗಳನ್ನು ಕೆ.ಎಂ.ಇ.ಆರ್.ಸಿ ಅನುದಾನದಡಿ ದುರಸ್ಥಿ ಮಾಡಲಾಗುತ್ತಿದೆ. ಸೋರುತ್ತಿರುವ ಶಾಲಾ ಕೊಠಡಿ ದುರಸ್ಥಿಗೆ ಮೊದಲ ಆದ್ಯತೆ ನೀಡಲಾಗಿದೆ ಎಂದರು.

ಪೋಷಕರು ಆರ್ಥಿಕವಾಗಿ ಹೊರೆ ಮಾಡಿಕೊಂಡು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಬಾರದು. ಖಾಸಗಿ ಶಾಲೆಗಳಲ್ಲಿ ಡೊನೇಷನ್ ಹಾಗೂ ಶುಲ್ಕಗಳು ಹೆಚ್ಚಿವೆ. ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲ. ಸರ್ಕಾರಿ ಶಾಲಾ ಶಿಕ್ಷಕರ  ಮಗನಾಗಿ, ಸರ್ಕಾರಿ ಶಾಲೆಯಲ್ಲಿ ಓದಿ, ಇಂದು ಭಾರತೀಯ ಆಡಳಿತ ಸೇವೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಸರ್ಕಾರಿ ಶಾಲೆಗಳ ಬಗ್ಗೆ ಮಕ್ಕಳು ಹಾಗೂ ಪೋಷಕರ ಮನಸ್ಸಿನಲ್ಲಿ ಯಾವುದೇ ಕೀಳರಿಮೆ ಸಲ್ಲದು ಎಂದರು.

ಸರ್ಕಾರಿ ಶಾಲಾ ಶಿಕ್ಷಕರು ಚಟುವಟಿಕೆ ಆಧಾರದಲ್ಲಿ ಮಕ್ಕಳಿಗೆ ಪಾಠ ಮಾಡಬೇಕು. ಮಕ್ಕಳಿಗೆ ಪಾಠದ ಜೊತೆ ಸಂಸ್ಕಾರವನ್ನು ಸಹ ಕಲಿಸಬೇಕು. ಉತ್ತಮ ಶಿಕ್ಷಣ ನೀಡಬೇಕು. ಜಿಲ್ಲೆ ಎಸ್.ಎಸ್.ಎಲ್.ಸಿಯಲ್ಲಿ ರಾಜ್ಯಕ್ಕೆ  ಪ್ರಥಮ ಸ್ಥಾನದಲ್ಲಿದ್ದು, ಇದನ್ನು ಮುಂದುವರಿಸಿಕೊಂಡು ಹೋಗಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುವುದು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಗಿರಿಜಾ ಮಾತನಾಡಿ, ಮಕ್ಕಳನ್ನು ಪ್ರೀತಿ ಹಾಗೂ ನಗು ಮೊಗದಿಂದ ಶಾಲೆಗೆ ಆಹ್ವಾನಿಸಿ, ವರ್ಷವಿಡೀ ಸಂತಸದಿಂದ ಕಲಿಕೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಶಾಲಾ ಪ್ರಾರಂಭೋತ್ಸವದ ಉದ್ದೇಶವಾಗಿದೆ. ಶಿಕ್ಷಣವನ್ನು ಮಕ್ಕಳ ಮೂಲಭೂತ ಹಕ್ಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ 2023-24ನೇ ಸಾಲಿಗೆ ಮಕ್ಕಳನ್ನು ದಾಖಲಿಸಿಕೊಳ್ಳುವ ಮೂಲಕ ದಾಖಲಾತಿ ಆಂದೋಲನಕ್ಕೆ ಚಾಲನೆ ನೀಡಲಾಯಿತು. ಮಕ್ಕಳಿಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು. ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಮೇದೆಹಳ್ಳಿ ಗ್ರಾಮದಲ್ಲಿ ಸಿಂಗಾರಗೊಂಡ ಎತ್ತಿನಗಾಡಿಯಲ್ಲಿ ಶಾಲಾ ಮಕ್ಕಳ ಮೆರವಣಿಗೆ ಮಾಡಲಾಯಿತು.

ಗ್ರಾ.ಪಂ.ಅಧ್ಯಕ್ಷೆ ಭಾಗ್ಯಮ್ಮ, ಶಾಲಾ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಂಜಣ್ಣ, ಉಪಾಧ್ಯಕ್ಷೆ ಆಶಾ, ಗ್ರಾ.ಪಂ.ಸದಸ್ಯರುಗಳಾದ ದುಗ್ಗಪ್ಪ, ಸುಶೀಲಮ್ಮ, ಎಂ.ಜಿ.ಜಯರಾಮರೆಡ್ಡಿ, ಲಕ್ಷ್ಮೀದೇವಿ ಶ್ರೀನಿವಾಸ, ಕಮಲಮ್ಮ, ನಿಂಗಪ್ಪ, ಶಾಲಾ ಅಭಿವೃದ್ಧಿ ಮಂಡಳಿ ಸದಸ್ಯರಾದ ಪ್ರಕಾಶ್, ಮಂಜುನಾಥ, ದುರ್ಗಪ್ಪ, ನೌಕರ ಸಂಘದ ಜಿಲ್ಲಾಧ್ಯಕ್ಷ ಕೆ.ಟಿ.ತಿಮ್ಮಾರೆಡ್ಡಿ, ಮುಖಂಡರಾದ ಶಂಕರ, ವಿಜಯಕುಮಾರ್, ಪಿಡಿಓ ಪಾತಣ್ಣ, ಕ್ಷೇತ್ರ ಸಮನ್ವಯಾಧಿಕಾರಿ ಸಂಪತ್ ಸೇರಿದಂತೆ ಶಾಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *