Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಶಾಲಾ ಮಕ್ಕಳಿಗೆ ಭರ್ಜರಿ ಸಿಹಿ ಸುದ್ದಿ : ವಾರದ ಎಲ್ಲಾ 6 ದಿನವೂ ಮೊಟ್ಟೆ/ಬಾಳೆಹಣ್ಣು ವಿತರಣೆಗೆ ಸರ್ಕಾರ ಆದೇಶ!

---Advertisement---

ಸುದ್ದಿಒನ್,ಬೆಂಗಳೂರು,ಮೇ.22: ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಮಹತ್ವದ ಕೊಡುಗೆಯೊಂದನ್ನು ನೀಡಿದೆ. ಅಪೌಷ್ಟಿಕತೆ ಮತ್ತು ರಕ್ತಹೀನತೆಯನ್ನು ತಡೆಗಟ್ಟುವ ಉದ್ದೇಶದಿಂದ, 2026-27ನೇ ಶೈಕ್ಷಣಿಕ ಸಾಲಿನಲ್ಲಿ LKG ಯಿಂದ 10ನೇ ತರಗತಿಯವರೆಗಿನ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ವಾರದ ಎಲ್ಲಾ 6 ದಿನಗಳೂ ಪೂರಕ ಪೌಷ್ಟಿಕ ಆಹಾರವಾಗಿ ಮೊಟ್ಟೆ ಅಥವಾ ಬಾಳೆಹಣ್ಣನ್ನು ವಿತರಿಸಲು ಶಾಲಾ ಶಿಕ್ಷಣ ಇಲಾಖೆ (ಪಿ.ಎಂ. ಪೋಷಣ್) ಕಡ್ಡಾಯ ಆದೇಶ ಹೊರಡಿಸಿದೆ.

ಈ ಹಿಂದೆ ವಾರದಲ್ಲಿ ಕೇವಲ 2 ದಿನಗಳಷ್ಟೇ ಮೊಟ್ಟೆ ವಿತರಿಸಲಾಗುತ್ತಿತ್ತು. ಆದರೆ, ‘ಅಜೀಂ ಪ್ರೇಮ್‌ಜೀ ಫೌಂಡೇಶನ್ ಫಾರ್ ಡೆವಲಪ್‌ಮೆಂಟ್’ (APF) ಸಂಸ್ಥೆಯ ಆರ್ಥಿಕ ಅನುದಾನ ಹಾಗೂ ಸಹಯೋಗದೊಂದಿಗೆ ಈ ಯೋಜನೆಯನ್ನು ವಾರದ ಎಲ್ಲಾ 6 ದಿನಗಳಿಗೂ (ಸೋಮವಾರದಿಂದ ಶನಿವಾರದವರೆಗೆ) ವಿಸ್ತರಿಸಲಾಗಿದೆ.

ಶೇ. 90ರಷ್ಟು ಪ್ರಗತಿ ಸಾಧಿಸಲು ಗುರಿ: ಪ್ರಸ್ತುತ ಜಿಲ್ಲಾ ಮಟ್ಟದಲ್ಲಿ ಶೇ. 50 ರಿಂದ 60 ರಷ್ಟಿರುವ ಮೊಟ್ಟೆ ವಿತರಣೆಯ ಪ್ರಮಾಣವನ್ನು ಈ ಶೈಕ್ಷಣಿಕ ಸಾಲಿನಲ್ಲಿ ಶೇ. 90 ರವರೆಗೆ ಹೆಚ್ಚಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಇಲಾಖೆ ಸೂಚಿಸಿದೆ.

ಪೋಷಕರ ಒಪ್ಪಿಗೆ ಕಡ್ಡಾಯ: ಶೈಕ್ಷಣಿಕ ವರ್ಷದ ಆರಂಭದಲ್ಲೇ ಹಳೆಯ ಹಾಗೂ ಹೊಸದಾಗಿ ದಾಖಲಾದ ವಿದ್ಯಾರ್ಥಿಗಳ ಪೋಷಕರಿಂದ ಮೊಟ್ಟೆ ಸೇವನೆ ಕುರಿತು ಒಪ್ಪಿಗೆ ಪತ್ರ ಪಡೆಯಬೇಕು. ಮೊಟ್ಟೆ ತಿನ್ನದ ವಿದ್ಯಾರ್ಥಿಗಳಿಗೆ ಪರ್ಯಾಯವಾಗಿ ಬಾಳೆಹಣ್ಣನ್ನು ವಿತರಿಸಬೇಕು.

ಮೊಟ್ಟೆ ಸೇವನೆಯ ಮಹತ್ವ ಹಾಗೂ ಪೌಷ್ಟಿಕಾಂಶದ ಕುರಿತು ಶಾಲೆಗಳಲ್ಲಿ ಪ್ರಾರ್ಥನಾ ಸಭೆಗಳು, ಗೋಡೆ ಚಿತ್ರಗಳು ಹಾಗೂ ತಜ್ಞ ವೈದ್ಯರ ಮೂಲಕ ಜಾಗೃತಿ ಮೂಡಿಸಬೇಕು. ಮಾಸಿಕ ಹಾಜರಾತಿ, ಮೊಟ್ಟೆ/ಬಾಳೆಹಣ್ಣು ಖರೀದಿ ಪ್ರಮಾಣದ ವಿವರಗಳನ್ನು ‘SATS’ ಪೋರ್ಟಲ್‌ನಲ್ಲಿ ನಿಖರವಾಗಿ ದಾಖಲಿಸಬೇಕು. SDMC ಯವರು ಮಾಸಿಕ ಖರೀದಿ ಪ್ರಕ್ರಿಯೆಯನ್ನು ಪರಿಶೀಲಿಸಬೇಕು.ಬರುವ ಸೆಪ್ಟೆಂಬರ್-2026 ರ ವೇಳೆಗೆ ಪ್ರತಿಯೊಂದು ಶಾಲೆಯೂ ಶೇ. 80 ರಷ್ಟು ಮೊಟ್ಟೆ ಸೇವನೆಯ ಗುರಿಯನ್ನು ತಲುಪಬೇಕು. ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಶಾಲಾ ಮುಖ್ಯ ಶಿಕ್ಷಕರು ಹಾಗೂ ಇಲಾಖೆಯ ಉನ್ನತ ಅಧಿಕಾರಿಗಳಿಗೆ ವಹಿಸಲಾಗಿದೆ.

Join WhatsApp

Join Now

Join Telegram

Join Now