ಧಾರವಾಡ: ಹುಬ್ಬಳ್ಳಿ ಹಾಗೂ ಧಾರಾವಾಡ ಅವಳಿ ನಗರವಾಗಿವೆ. ಅಭಿವೃದ್ಧಿಗೆ ಏನೇ ಅನುದಾನ ಬಂದರು ಸಹ ಮೊದಲು ಹುಬ್ಬಳಿಯ ಅಭಿವೃದ್ಧಿ ಕಡೆಗೆ ಗಮನ ಹರಿಸುತ್ತಾರೆ. ಹುಬ್ಬಳ್ಳಿ ಅಭಿವೃದ್ಧಿ ಕಂಡಷ್ಟು ಧಾರವಾಡ ಅಭಿವೃದ್ಧಿಯಾಗಿಲ್ಲ ಎಂಬ ಬೇಸರ ಧಾರವಾಡ ಮಂದಿಯದ್ದು ಇದಕ್ಕಾಗಿ ಪ್ರತ್ಯೇಕ ಪಾಲಿಕೆ ಮಾಡಿ ಅಭಿವೃದ್ಧಿಯತ್ತ ಗಮನ ಹರಿಸಬೇಕೆಂದು ಹಲವು ದಶಕಗಳಿಂದ ಚಿಂತಕರು, ಸಾಹಿತಿಗಳು ಹೋರಾಟ ಮಾಡಿಕೊಂಡೆ ಬಂದಿದ್ದಾರೆ ಆ ಹೋರಾಟಕ್ಕೆ ಇಂದು ಫಲ ಸಿಕ್ಕಿದೆ.
ಈ ಸಂಬಂಧ ಈಚೆಗಷ್ಟೇಹೋರಾಟಗಾರರು ನಿಯೋಗವೊಂದನ್ನ ತೆಗೆದುಕೊಂಡು ಹೋಗಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದರು. ಸಚಿವ ಸಂತೋಷ್ ಲಾಡ್, ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಹಲವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಪ್ರತ್ಯೇಕ ಪಾಲಿಕೆಗೆ ಬೇಡಿಕೆ ಇಟ್ಟಿದ್ದರು. ಈ ಎಲ್ಲಾ ಬೆಳವಣಿಗೆಯ ಬಳಿಕ ಇದೀಗ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆಗೆ ಸರ್ಕಾರ ಅಸ್ತು ಎಂದಿದೆ. ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ ಓಕೆ ಎಂದಿದ್ದಾರೆ.
ಇದು ಧಾರವಾಡ ಮಂದಿಗೆ ಪೇಡ ತಿಂದಷ್ಟೇ ಖುಷಿ ನೀಡಿದೆ. ಧಾರವಾಡದಲ್ಲಿ 26 ವಾರ್ಡ್ ಗಳಿವೆ. ಹುಬ್ಬಳ್ಳಿಯಂತೆ ಧಾರವಾಡವೂ ಅಭಿವೃದ್ಧಿ ಕಾಣಬೇಕು ಅಂದ್ರೆ ಪ್ರತ್ಯೇಕ ಮಹಾನಗರ ಪಾಲಿಕೆಯಾಗಬೇಕು ಎಂದು ಮೂರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರು. ಈ ಹೋರಾಟದ ಫಲವಾಗಿಯೇ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆಯಲ್ಲಿ ಎಲ್ಲರ ಒಪ್ಪಿಗೆ ಸಿಕ್ಕಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಹೋರಾಟ ಮಾಡಿದವರೆಲ್ಲ ಪೇಡ ತಿನ್ನಿಸಿ ಸಂಭ್ರಮಿಸಿದ್ದಾರೆ. ಇನ್ಮುಂದೆ ಧಾರಾವಾಡ ಕೂಡ ಹುಬ್ಬಳ್ಳಿಯಂತೆ ಅಭಿವೃದ್ಧಿ ಕಾಣಲಿದೆ ಎಂಬ ಖುಷಿ ವ್ಯಕ್ತ ಪಡಿಸಿದ್ದಾರೆ. ಸಿಹಿ ತಿನ್ನಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.