Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಒಬಿಸಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ: ಉಚಿತ ವಸತಿ ಸಹಿತ ಪಿಯುಸಿ ಶಿಕ್ಷಣ, ನೀಟ್/ಜೆಇಇ ತರಬೇತಿ

---Advertisement---

ಸುದ್ದಿಒನ್,ಬೆಂಗಳೂರು,ಮೇ.22: ರಾಜ್ಯದ ಹಿಂದುಳಿದ ವರ್ಗಗಳ (OBC) ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರವು ಬಂಪರ್ ಕೊಡುಗೆಯೊಂದನ್ನು ಪ್ರಕಟಿಸಿದೆ. ಸರ್ಕಾರಿ ಶಾಲೆಗಳಲ್ಲಿ ಓದಿ 10ನೇ ತರಗತಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ 2 ವರ್ಷಗಳ ಉಚಿತ ವಸತಿ ಸಹಿತ ಪಿಯುಸಿ ಶಿಕ್ಷಣ ಹಾಗೂ ಇದರೊಂದಿಗೆ ನೀಟ್ (NEET), ಜೆಇಇ (JEE) ಮತ್ತು ಸಿಇಟಿ (CET) ಪರೀಕ್ಷೆಗಳಿಗೆ ಉಚಿತ ಪೂರ್ವ ತರಬೇತಿ ನೀಡಲು ರಾಜ್ಯ ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಂಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಒಪ್ಪಿಗೆ ನೀಡಲಾಗಿದ್ದು, ಇದರಿಂದ ಬಡ ಮತ್ತು ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ವೃತ್ತಿಪರ ಶಿಕ್ಷಣದ ಕನಸನ್ನು ನನಸಾಗಿಸಲು ದೊಡ್ಡ ನೆರವು ಸಿಗಲಿದೆ.

₹15 ಕೋಟಿ ವೆಚ್ಚದಲ್ಲಿ 500 ವಿದ್ಯಾರ್ಥಿಗಳಿಗೆ ಭಾಗ್ಯ!

ಈ ಯೋಜನೆಯಡಿ ಪ್ರತಿ ಜಿಲ್ಲೆಯಿಂದ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ತಲಾ 15 ವಿದ್ಯಾರ್ಥಿಗಳಂತೆ, ರಾಜ್ಯಾದ್ಯಂತ ಒಟ್ಟು 500 ಹಿಂದುಳಿದ ವರ್ಗಗಳ (OBC) ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತವಾಗಿ ವಸತಿ ಸಹಿತ ಪಿಯುಸಿ ಶಿಕ್ಷಣ ನೀಡಲಾಗುವುದು. ಜೊತೆಗೆ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಷ್ಠಿತ ಕೋರ್ಸ್ಗಳ ಪ್ರವೇಶಕ್ಕೆ ಅಗತ್ಯವಿರುವ ನೀಟ್, ಜೆಇಇ ಹಾಗೂ ಸಿಇಟಿ ಪರೀಕ್ಷೆಗಳಿಗೆ ತಜ್ಞರಿಂದ ಉನ್ನತ ಮಟ್ಟದ ತರಬೇತಿ ಕೊಡಿಸಲು ಸರ್ಕಾರ ನಿರ್ಧರಿಸಿದೆ. ಈ ಮಹತ್ವಾಕಾಂಕ್ಷಿ ಯೋಜನೆಗಾಗಿ ಸರ್ಕಾರ ₹15 ಕೋಟಿ ವೆಚ್ಚ ಮಾಡಲು ಅನುಮೋದನೆ ನೀಡಿದೆ.

ಸಚಿವ ಸಂಪುಟ ಸಭೆಯ ಇತರ ಪ್ರಮುಖ ನಿರ್ಧಾರಗಳು
ಅಂಗನವಾಡಿಗಳಿಗೆ ಪ್ರೀ-ಸ್ಕೂಲ್ ಕಿಟ್: ರಾಜ್ಯದ 69,922 ಅಂಗನವಾಡಿ ಕೇಂದ್ರಗಳಿಗೆ ತಲಾ ₹3 ಸಾವಿರ ವೆಚ್ಚದಲ್ಲಿ “ಶಾಲಾ ಪೂರ್ವ ಕಿಟ್ಗಳನ್ನು” ಖರೀದಿಸಲು ಒಟ್ಟು ₹20.98 ಕೋಟಿ ವೆಚ್ಚಕ್ಕೆ ಸಂಪುಟ ಅನುಮೋದಿಸಿದೆ.

ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ₹100 ಕೋಟಿ ಅಂದಾಜು ವೆಚ್ಚದಲ್ಲಿ 200 ಹಾಸಿಗೆಗಳ ಸಾಮರ್ಥ್ಯದ ನೂತನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಆರೋಗ್ಯ ಕೇಂದ್ರಗಳಿಗೆ ಸಲಕರಣೆ ಖರೀದಿ: ರಾಜ್ಯದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನಮ್ಮ ಕ್ಲಿನಿಕ್ಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಿಗೆ ಅಗತ್ಯವಿರುವ ಪ್ರಯೋಗಾಲಯದ ಉಪಭೋಗ್ಯ ವಸ್ತುಗಳು ಹಾಗೂ ಉಪಕರಣಗಳನ್ನು 15ನೇ ಹಣಕಾಸು ಆಯೋಗದ ಅನುದಾನದಡಿ ₹22 ಕೋಟಿ ವೆಚ್ಚದಲ್ಲಿ ಖರೀದಿಸಲು ಸಮ್ಮತಿಸಲಾಗಿದೆ.

ರಾಯಚೂರು-ಯಾದಗಿರಿಯಲ್ಲಿ ಆಸ್ಪತ್ರೆ ನಿರ್ಮಾಣ: ಯಾದಗಿರಿ ಜಿಲ್ಲೆಯ ಶಹಾಪುರ ಹಾಗೂ ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ತಲಾ 50 ಹಾಸಿಗೆ ಸಾಮರ್ಥ್ಯದ ಎಂಸಿಎಚ್ (MCH) ಆಸ್ಪತ್ರೆ ನಿರ್ಮಾಣ ಕಾಮಗಾರಿಗಳನ್ನು ₹38 ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ಒಪ್ಪಿಗೆ ದೊರೆತಿದೆ.

ನೀರಾವರಿ ಮತ್ತು ರಸ್ತೆ ಅಭಿವೃದ್ಧಿ: ರಾಯಚೂರು ಮತ್ತು ಮಾನ್ವಿ ತಾಲೂಕಿನಲ್ಲಿ ತುಂಗಭದ್ರಾ ಎಡದಂಡೆ ಕಾಲುವೆ ವಿತರಣಾ ನಾಲೆಗಳ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ₹182.70 ಕೋಟಿ ಮೊತ್ತದ ಮುಟಮಾರಿ ವೀರಭದ್ರೇಶ್ವರ ಏತ ನೀರಾವರಿ ಯೋಜನೆಗೆ ಹಾಗೂ ಮಂಡ್ಯ, ಕನಕಪುರ, ಮೈಸೂರು ಭಾಗದ ವಿವಿಧ ಮೂಲಸೌಕರ್ಯ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೂ ಸಂಪುಟ ಸಭೆಯಲ್ಲಿ ಚಾಲನೆ ನೀಡಲಾಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now