ಚಿತ್ರದುರ್ಗ,(ಜುಲೈ.26) : ಚಿಕ್ಕಜಾಜೂರಿನಿಂದ ಗುಂತಕಲ್ ಗೆ ಹೋಗಲು ಕಳೆದ ಎರಡು ವರ್ಷಗಳ ಹಿಂದೆ ರೈಲಿನ ಸೌಲಭ್ಯ ಇತ್ತು. ಆದರೆ ಕೊರೊನಾ ಮಹಾಮಾರಿಯಿಂದಾಗಿ ಡಿಸೇಲ್ ಅಳವಡಿತ ರೈಲು ಸೇವೆ ಸ್ಥಗಿತಗೊಂಡಿತ್ತು. ಇದೀಗ ಚಿಕ್ಕಜಾಜೂರಿನಿಂದ ಗುಂತಕಲ್ ಗೆ ವಿದ್ಯುತ್ ಚಾಲಿತ ರೈಲು ಮಾರ್ಗವಾಗಿ ಪರಿವರ್ತನೆಯಾಗಿ ಪ್ರತಿದಿನ ಪ್ಯಾಸೆಂಜರ್ ರೈಲು ಸಂಚಾರ ಆರಂಭಿಸಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರು ರೈಲ್ವೆ ನಿಲ್ದಾಣದಿಂದ ಆಂಧ್ರಪ್ರದೇಶದ ಗುಂತಕಲ್ ವರೆಗೆ ಜುಲೈ 25 ರಿಂದ ರೈಲು ಆರಂಭವಾಗಿದೆ. ಚಿಕ್ಕಜಾಜೂರು ರೈಲ್ವೆ ನಿಲ್ದಾಣ ವ್ಯವಸ್ಥಾಪಕ ಜಯಾನಂದ ಮೂರ್ತಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಲೋಕೋ ಇನ್ಸ್ಪೆಕ್ಟರ್ ಏಡುಕುಂಡಲು ಅವರ ಪರಿವೀಕ್ಷಣೆ ನಂತರ ಚಾಲಕರಾದ ಅನಂತರಾವ್ ಮತ್ತು ಪ್ರಶಾಂತ್ ಕುಮಾರ್ ಅವರು ವಿದ್ಯುತ್ ಚಾಲಿತ ರೈಲು ಸಂಚಾರ ಆರಂಭಿಸಿದೆ.
ಚಿತ್ರದುರ್ಗದಲ್ಲಿ ಆರಂಭವಾದ ಮೊಟ್ಟ ಮೊದಲ ವಿದ್ಯುತ್ ಚಾಲಿತ ಪ್ಯಾಸೆಂಜರ್ ರೈಲು ಸೇವೆ ಇದಾಗಿದೆ. ಚಿಕ್ಕಜಾಜೂರು ರೈಲ್ವೆ ನಿಲ್ದಾಣದಿಂದ ಮಧ್ಯಾಹ್ನ 2.05 ಕ್ಕೆ ಹೊರಡುತ್ತದೆ. ಅಲ್ಲಿಂದ ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮೂರು, ರಾಯದುರ್ಗ ನಂತರ ಬಳ್ಳಾರಿ ಮೂಲಕ ಸಂಜೆ 7.05 ಗಂಟೆಗೆ ಗುಂತಕಲ್ ತಲುಪುತ್ತದೆ. ಮರುದಿನ ಬೆಳಿಗ್ಗೆ ಬೆಳಿಗ್ಗೆ 7.40 ಕ್ಕೆ ಹೊರಟು 1.30 ಕ್ಕೆ ಚಿಕ್ಕಜಾಜೂರು ರೈಲ್ವೆ ನಿಲ್ದಾಣ ತಲುಪಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.