ಬೆಂಗಳೂರು: ದೀಪಾವಳಿ ಹಬ್ಬದ ಬಳಿಕ ಚಿನ್ನ ಬೆಳ್ಳಿ ದರದಲ್ಲಿ ದಿನೇ ದಿನೇ ಇಳಿಕೆಯಾಗುತ್ತಿದೆ. ಹತ್ತು ಗ್ರಾಂಗೆ ಒಂದು ಲಕ್ಷ ರೂಪಾಯಿ ಏರಿಕೆಯಾಗುತ್ತದೆ ಎಂಬ ಭಯ ಆಭರಣ ಪ್ರಿಯರಿಗೆ ಕಾಡುತ್ತಿತ್ತು. ಆದರೆ ಈಗ ಕೊಂಚ ನಿರಾಳವಾಗಿದೆ. ದೀಪಾವಳಿ ಮುಗಿದ ಮೇಲೆ ದಿನೇ ದಿನೇ ಚಿನ್ನದ ಬೆಲೆಯಲ್ಲಿ ಕಡಿಮೆಯಾಗುತ್ತಲೆ ಬರುತ್ತಿದೆ. ಇಂದು ಕೂಡ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು, ಯಾವ್ಯಾವ ನಗರದಲ್ಲಿ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.
ಕಳೆದ ಹತ್ತು ದಿನದಲ್ಲಿ ಹತ್ತು ಗ್ರಾಂ ಮೇಲೆ 4,750 ರೂಪಾಯಿ ಕಡಿಮೆಯಾಗಿದೆ. ಅದರಲ್ಲೂ ಮದುವೆ ಸಂದರ್ಭದಲ್ಲಿಯೇ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿರುವುದು ಗ್ರಾಗಕರ ಸಂತಸಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಡಿಮೆಯಾಗಬಹುದು ಎಂಬ ನಿರೀಕ್ಷೆ ಇದೆ. ಅಮೆರಿಕಾ ಅಧ್ಯಕ್ಷೀಯ ಚುನಾವಣಾ ಫಲಿತಾಂಶದ ಬಳಿಕ ಚಿನ್ನದ ದರದಲ್ಲಿ ಶೇಕಡ 6ರಷ್ಟು ಇಳಿಕೆಯಾಗಿದೆ. ಸಾಮಾನ್ಯವಾಗಿ ಮದುವೆ, ಶುಭ ಸಮಾರಂಭಗಳ ಸಮಯದಲ್ಲಿ ಚಿನ್ನದ ಬೆಲೆ ಏರಿಕೆಯಾಗುತ್ತಿತ್ತು. ಆದರೆ ಈ ತಿಂಗಳಲ್ಲಿ ಇಳಿಕೆಯತ್ತ ಮುಖ ಮಾಡಿರುವುದು ಖುಷಿ ತಂದಿದೆ.
ಇಂದು (ಶುಕ್ರವಾರ) ಬೆಂಗಳೂರು ನಗರದಲ್ಲಿ 24 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 75,650 ರೂಪಾಯಿ ಇದೆ. 1 ಗ್ರಾಂ ಚಿನ್ನಕ್ಕೆ 7,565 ರೂಪಾಯಿ ಇದೆ. ಇನ್ನು 22 ಕ್ಯಾರೆಟ್ ಆಭರಣ ಚಿನ್ನದ ದರ ಹತ್ತು ಗ್ರಾಂಗೆ ಸದ್ಯಕ್ಕೆ 69,350 ರೂಪಾಯಿ ಇದೆ. ಒಂದು ಗ್ರಾಂಗೆ 6,935 ರೂಪಾಯಿ ಆಗಿದೆ. ಬೆಳ್ಳಿಯ ದರದಲ್ಲೂ ದಿನೇ ದಿನೇ ಇಳಿಕೆಯಾಗುತ್ತಿದ್ದು, ಇಂದು 91 ರೂಪಾಯಿ ಇತ್ತು. ಆದರೆ ಕಳೆದ ಎರಡ್ಮೂರು ದಿನದಿಂದ ಕಡಿಮೆಯಾಗುತ್ತಿತ್ತು. ಇಂದು 91 ರೂಪಾಯಿಗೆ ಬಂದು ನಿಂತಿದೆ.