ತಿರುವನಂತಪುರಂ: ಶಬರಿಮಲೆ ದೇವಸ್ಥಾನದಲ್ಲಿ ಮತ್ತೊಂದು ಚಿನ್ನದ ಆಭರಣಕ್ಕೆ ಸಂಬಂಧಿಸಿದ ಅಕ್ರಮದ ಆರೋಪ ಬೆಳಕಿಗೆ ಬಂದಿದೆ. ಸನ್ನಿಧಾನಂನ ಸ್ಟ್ರಾಂಗ್ ರೂಮಿನಲ್ಲಿ ಇರಿಸಲಾಗಿದ್ದ 446 ಗ್ರಾಂ ತೂಕದ ಚಿನ್ನದ ಕಿರೀಟ ಕಾಣೆಯಾಗಿದ್ದು, ಅದರ ಬದಲಿಗೆ ನಕಲಿ ಕಿರೀಟ ಇಡಲಾಗಿರುವುದು ಪರಿಶೀಲನೆ ವೇಳೆ ಪತ್ತೆಯಾಗಿದೆ.
ದೇವಾಲಯದ ತಿರುವಾಭರಣಗಳ ಎಣಿಕೆ ಮತ್ತು ಪರಿಶೀಲನೆ ವೇಳೆ ಈ ವ್ಯತ್ಯಾಸ ಬೆಳಕಿಗೆ ಬಂದಿದೆ. ಹೈಕೋರ್ಟ್ ನಿರ್ದೇಶನದ ಮೇರೆಗೆ ನಡೆಯುತ್ತಿರುವ ತನಿಖೆಯಲ್ಲಿ ಈ ವಿಷಯ ಬಹಿರಂಗವಾಗಿದೆ.
ಕಿರೀಟದ ಭದ್ರತೆ, ಅದನ್ನು ನಿರ್ವಹಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಜವಾಬ್ದಾರಿಗಳ ಕುರಿತು ಇದೀಗ ಪ್ರಶ್ನೆಗಳು ಎದ್ದಿವೆ.ಈ 446 ಗ್ರಾಂ ಚಿನ್ನದ ಕಿರೀಟವನ್ನು 2012ರಲ್ಲಿ ತಮಿಳುನಾಡಿನ ಭಕ್ತರು ಶಬರಿಮಲೆ ದೇವಸ್ಥಾನಕ್ಕೆ ಅರ್ಪಿಸಿದ್ದರು ಎನ್ನಲಾಗಿದೆ. ಬಳಿಕ ಕಿರೀಟವನ್ನು ಸನ್ನಿಧಾನಂನಿಂದ ಆರನ್ಮುಳದ ಮುಖ್ಯ ಸ್ಟ್ರಾಂಗ್ ರೂಮಿಗೆ ವರ್ಗಾಯಿಸಲಾಗಿತ್ತು.ಆದರೆ ಕಿರೀಟವನ್ನು ಸಿಸಿಟಿವಿ ಕಣ್ಗಾವಲಿಗೆ ಒಳಪಡದ ಸ್ಥಳದಲ್ಲಿ ಇರಿಸಲಾಗಿತ್ತು ಎಂಬ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ. ಇದೀಗ ಅಸಲಿ ಕಿರೀಟದ ಬದಲು ನಕಲಿ ಅಥವಾ ಕಡಿಮೆ ಮೌಲ್ಯದ ವಸ್ತುಗಳಿಂದ ತಯಾರಿಸಿದ ಕಿರೀಟ ಪತ್ತೆಯಾಗಿರುವುದು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ.

ಇದೇ ತನಿಖೆಯ ವೇಳೆ ಆರನ್ಮುಳ ದೇವಸ್ವಂನ ಸ್ಟ್ರಾಂಗ್ ರೂಮಿನಲ್ಲಿ ಇರಿಸಲಾಗಿದ್ದ 4 ಗ್ರಾಂ ತೂಕದ ಚಿನ್ನದ ಹಾರವೂ ಕಾಣೆಯಾಗಿರುವುದು ಪತ್ತೆಯಾಗಿದೆ.ಒಂದೇ ಪರಿಶೀಲನೆಯಲ್ಲಿ ಎರಡು ಚಿನ್ನದ ಆಭರಣಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ತನಿಖೆಯ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುವ ಸಾಧ್ಯತೆ ಇದೆ. ಭದ್ರತಾ ಲೋಪ ಸೇರಿದಂತೆ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುವುದು ಎಂದು ದೇವಸ್ವಂ ಮಂಡಳಿ ತಿಳಿಸಿದೆ.
ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ನ್ಯಾಯಮೂರ್ತಿ ಕೆ.ಟಿ. ಶಂಕರನ್ ನೇತೃತ್ವದಲ್ಲಿ ದೇವಾಲಯದ ತಿರುವಾಭರಣಗಳ ಎಣಿಕೆ ಮತ್ತು ಪರಿಶೀಲನೆ ನಡೆಯುತ್ತಿದೆ. ಮೊದಲ ಹಂತದ ವರದಿಯನ್ನು ಮುಂದಿನ ತಿಂಗಳ ಮೊದಲ ವಾರದಲ್ಲಿ ಹೈಕೋರ್ಟ್ಗೆ ಸಲ್ಲಿಸುವ ನಿರೀಕ್ಷೆಯಿದೆ.ಕಿರೀಟವನ್ನು ಸಂರಕ್ಷಿಸುವ ಜವಾಬ್ದಾರಿ ಹೊಂದಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಯ ಪಾತ್ರದ ಬಗ್ಗೆಯೂ ಪರಿಶೀಲನೆ ನಡೆಯಲಿದೆ. ಹೈಕೋರ್ಟ್ ವರದಿ ಸಲ್ಲಿಕೆಯ ಬಳಿಕ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ವಹಿಸುವುದು ಸೇರಿದಂತೆ ಮುಂದಿನ ಕ್ರಮಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ದೇವಸ್ವಂ ಮಂಡಳಿ ಅಧ್ಯಕ್ಷ ಕೆ. ಜಯಕುಮಾರ್ ತಿಳಿಸಿದ್ದಾರೆ.
ಚಿನ್ನದ ಕಿರೀಟ ನಾಪತ್ತೆಯಾದದ್ದು ಹೇಗೆ? ಅಸಲಿ ಕಿರೀಟದ ಬದಲು ನಕಲಿ ಕಿರೀಟವನ್ನು ಇಟ್ಟವರು ಯಾರು? ಎಂಬ ಪ್ರಶ್ನೆಗಳಿಗೆ ತನಿಖೆಯ ಬಳಿಕ ಉತ್ತರ ಸಿಗಬೇಕಿದೆ.










