ಗೋಬರ್-ಧನ್: ಬಯೋಗ್ಯಾಸ್ ಘಟಕ ಅನುಷ್ಠಾನಕ್ಕಾಗಿ ವಿಸ್ತೃತ ಯೋಜನೆಗೆ ಅನುಮೋದನೆ : ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಸ್.ದಿವಾಕರ

suddionenews
1 Min Read

ಚಿತ್ರದುರ್ಗ (ಡಿ.22) : ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತರಳಬಾಳು ಜಗದ್ಗುರು ಬೃಹನ್ಮಠ ಗೋಶಾಲೆಯಲ್ಲಿ ಗೋಬರ್-ಧನ್ ಕಾರ್ಯಕ್ರಮದಡಿ ಬಯೋಗ್ಯಾಸ್ ಘಟಕಗಳನ್ನು ಅನುಷ್ಠಾನ ಮಾಡಲು ಸಲ್ಲಿಸಿರುವ ವಿಸ್ತøತ ಯೋಜನೆಗೆ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ದಿವಾಕರ ತಿಳಿಸಿದ್ದಾರೆ.

ಜಿಲ್ಲೆಯ ಆರು ತಾಲ್ಲೂಕುಗಳ ಗ್ರಾಮೀಣ ಪ್ರದೇಶಗಳ ಉತ್ಪತ್ತಿಯಾಗುವ ಹಸಿಕಸ ಹಾಗೂ ಜಾನುವಾರು ತ್ಯಾಜ್ಯವನ್ನು ಸಮರ್ಪಕವಾಗಿ ಸಿಗುವ ಗ್ರಾಮಗಳಲ್ಲಿ ಗೋಬರ್-ಧನ್ ಕಾರ್ಯಕ್ರಮದಡಿ ಬಯೋಗ್ಯಾಸ್ ಘಟಕಗಳನ್ನು ಅನುಷ್ಠಾನ ಮಾಡಲು ಉದ್ದೇಶ ಹೊಂದಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಜಿಲ್ಲೆಯ ಆರು ತಾಲ್ಲೂಕುಗಳ ಪೈಕಿ 5 ಗ್ರಾಮ ಪಂಚಾಯಿತಿಗಳಲ್ಲಿ ಗೋಶಾಲೆ, ದೇವಸ್ಥಾನ ಮತ್ತು ಮಠಗಳ ಹತ್ತಿರ ಗೋಬರ್-ಧನ್ ಘಟಕ ನಿರ್ಮಿಸಲು ಸ್ಥಳ ಮತ್ತು ಮಾಹಿತಿ ಸಂಗ್ರಹಿಸಲಾಗಿದೆ ಮತ್ತು ಡಿಪಿಆರ್ ಹಾಗೂ ಕ್ರಿಯಾ ಯೋಜನೆಗಳನ್ನು ತಯಾರಿಸಿ ಸಲ್ಲಿಸಲು ತಾಂತ್ರಿಕ ಸಿಬ್ಬಂದಿಗಳಿಗೆ ತಿಳಿಸಲಾಗಿದೆ. ಜಿಲ್ಲಾ ಪಂಚಾಯಿತಿ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ಗೋಬರ್-ಧನ್ ಘಟಕ ನಿರ್ಮಾಣ ಮತ್ತು ನಿರ್ವಹಣೆ ಮಾಡಲಾಗುತ್ತಿದೆ.

ಜಾನುವಾರುಗಳಿಂದ ಉತ್ಪಾದೆಯಾಗುವ ಸಗಣಿ, ಮನೆಗಳಿಂದ ಉತ್ಪಾದನೆಯಾಗುವ ಹಸಿ ತ್ಯಾಜ್ಯ, ಬೆಳೆಗಳಿಂದ ಬರುವ ಹಸಿ ತ್ಯಾಜ್ಯ, ಮಾರುಕಟ್ಟೆಗಳಿಂದ ಬರುವ ಹಸಿ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಅದರಿಂದ ಅನಿಲ (ಬಯೋಗ್ಯಾಸ್) ಮತ್ತು ವಿದ್ಯುತ್ ಉತ್ಪಾದನೆ ಮಾಡುವ ವಿಧಾನವನ್ನು ಗೋಬರ್-ಧನ್ ಎಂದು ಕರೆಯುತ್ತಾರೆ.
ಅಡುಗೆ ಮಾಡಲು, ಯಂತ್ರಗಳನ್ನು ನಡೆಸಲು, ಜನರೇಟರ್ ಮೂಲಕ ಮನೆಗಳ ವಿದ್ಯುತ್ ಸಂಪರ್ಕಕ್ಕೆ ಗೋಬರ್-ಧನ್ ಘಟಕ ಸಹಕಾರಿಯಾಗುತ್ತದೆ. ವಿದ್ಯುತ್ ಮತ್ತು ಅಡುಗೆ ಅನಿಲದ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ಸಮುದಾಯದಲ್ಲಿ ಸ್ವಚ್ಛತೆ ಮತ್ತು ಉತ್ತಮ ನೈರ್ಮಲ್ಯ ಕಾಪಾಡಬಹುದು. ಉತ್ತಮ ಸಾವಯವ ಗೊಬ್ಬರ ಪಡೆಯಬಹುದು. ಸಾಂಕ್ರಾಮಿಕ ಖಾಯಿಲೆಗಳನ್ನು ತಪ್ಪಿಸಬಹುದಾಗಿದೆ.

ಗೋಬರ್-ಧನ್ ಘಟಕಗಳನ್ನು ಗೋಶಾಲೆ, ದೇವಸ್ಥಾನ ಮತ್ತು ಮಠ, ವಸತಿ ಗೃಹ, ಸಮುದಾಯ ಭವನ, ಮಾರುಕಟ್ಟೆ, ಶಾಲೆಗಳು, ಸ್ವಚ್ಛ ಸಂಕೀರ್ಣಗಳಲ್ಲಿ ಗೋಬರ್-ಧನ್ ಘಟಕಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ದಿವಾಕರ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *