ಚಿತ್ರದುರ್ಗ, (ಅ.30) : ರಾಜ್ಯ ಸರ್ಕಾರ ಎಸ್ಸಿ, ಎಸ್ಟಿ ಸಮುದಾಯಗಳಿಗೆ ಮೀಸಲಾತಿ ಹೆಚ್ಚಳ ಮಾಡಿರುವುದು ಒಳ್ಳೆಯ ಬೆಳವಣಿಗೆ ಮತ್ತು ಸ್ವಾಗತಾರ್ಹ. ಅದರಂತೆಯೇ ಮಧ್ಯ ಕರ್ನಾಟಕದಲ್ಲಿ ಅತಿ ಹೆಚ್ಚಾಗಿ ಕಂಡುಬರುವ ಬುಡಕಟ್ಟು ಕಾಡುಗೊಲ್ಲ ಸಮುದಾಯಕ್ಕೂ ಎಸ್ಟಿ ಮೀಸಲಾತಿ ನೀಡುವಂತೆ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಆಗ್ರಹಿಸಿದ್ದಾರೆ.
ಹಿರಿಯೂರಿನಲ್ಲಿ ಮಾತನಾಡಿದ ಅವರು ಮೀಸಲಾತಿ ಎಂಬುದು ಸಾಮಾಜಿಕ ನ್ಯಾಯ. ಕಾಡುಗೊಲ್ಲ ಬುಡಕಟ್ಟು ಸಮುದಾಯದಲ್ಲಿ ಜುಂಜಪ್ಪ, ಯತ್ತಪ್ಪ, ಜಂಪಣ್ಣ, ಕಾಟಪ್ಪ, ಕರಡಿಬುಳ್ಳಪ್ಪ ಇಂತಹ ಮಹಾನ್ ಪುರುಷರ ಪರಂಪರೆಯಿದೆ. 2018 ರಲ್ಲಿ ಜಾತಿ ಪಟ್ಟಿ ಕಾಡುಗೊಲ್ಲರನ್ನು ಜಾತಿ ಪಟ್ಟಿಗೆ ಸೇರಿಸಲಾಯಿತು.
ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ನನ್ನ ಬೇಡಿಕೆ ಇದೆ. ನಾನು ಸಹ ಈ ಬೇಡಿಕೆಯನ್ನು ರಾಜ್ಯದ ಸಮಾಜ ಕಲ್ಯಾಣ ಸಚಿವರಿಗೆ ಹಾಗೂ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅವರಿಗೆ ಮನವಿ ಮಾಡುತ್ತೇನೆ ಎಂದರು.
ಮೈಸೂರು ಜಯಚಾಮರಾಜೇಂದ್ರ ಒಡೆಯರ್, ಅಂಬೇಡ್ಕರ್, ಪೆರಿಯರ್ ಸೇರಿದಂತೆ ಮತ್ತಿತರರು ಮೀಸಲಾತಿ ತಿದ್ದುಪಡಿ ತರಲು ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಿದ್ದರು. ಈ ನಿಟ್ಟಿನಲ್ಲಿ ಮೀಸಲಾತಿ ಉಳಿಸುವುದು ಬಹಳ ಮುಖ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರವೇ ಕೃಷ್ಣ ಪೂಜಾರ್, ಸಮಾಜ ಸೇವಕ ಪಾರ್ಥ ಮೀಸೆ, ಬಸವರಾಜ್, ಸತೀಶ್, ಜಬೀ, ಪೈರಾಜ್, ಭಾಷಾ, ಅಫ್ಜಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.