in ,

ಶಿಕ್ಷಣಕ್ಕೆ ಆದ್ಯತೆ ನೀಡಿ, ಮಕ್ಕಳ ಭವಿಷ್ಯ ಉಜ್ವಲಗೊಳಿಸೋಣ- ದಿವ್ಯಪ್ರಭು ಜಿ.ಆರ್.ಜೆ.

suddione whatsapp group join

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ(ಜ. 21): ಗ್ರಾಮಗಳಲ್ಲಿ ಶಾಲೆ ಕಟ್ಟಡಗಳು, ಕೊಠಡಿಗಳು, ಅಂಗನವಾಡಿಗಳನ್ನು ನಿರ್ಮಿಸಿ, ಮಕ್ಕಳಿಗೆ ಉತ್ತಮ ಕಲಿಕಾ ವಾತಾವರಣ ಒದಗಿಸಿ, ಶಿಕ್ಷಣದ ಮೂಲಕ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲು ನಾವು ಆದ್ಯತೆ ನೀಡಬೇಕಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ಹೇಳಿದರು.

ಭರಮಸಾಗರ ಹೋಬಳಿ ಸಿರಿಗೆರೆ ಗ್ರಾ.ಪಂ. ವ್ಯಾಪ್ತಿಯ ಹಳೆರಂಗಾಪುರ ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲಾಧಿಕಾರಿ ಗಳ ನಡೆ, ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜನರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.  ಅದರಲ್ಲೂ ಮುಖ್ಯವಾಗಿ ಹಿಂದುಳಿದ, ಪರಿಶಿಷ್ಟ ಜಾತಿ, ಪ. ಪಂಗಡದವರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಮುಂದಾಗಬೇಕು, ಉತ್ತಮ ಶಿಕ್ಷಣದಿಂದ ಮಾತ್ರ ಮಕ್ಕಳ ಭವಿಷ್ಯವನ್ನು ಉಜ್ವಲ ಗೊಳಿಸಲು ಸಾಧ್ಯ.  ಉತ್ತಮ ಶಾಲೆಗಳು, ಅಂಗನವಾಡಿಗಳು, ಶಾಲೆಗೆ ಕಾಂಪೌಂಡ್, ಶೌಚಾಲಯ ಹೀಗೆ ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮವಾದ ಕಲಿಕ ವಾತಾವರಣ ನಿರ್ಮಿಸಿಕೊಡುವುದು ನಮ್ಮ ನಿಮ್ಮೆಲ್ಲೆರ ಜವಾಬ್ದಾರಿಯಾಗಿದೆ.

ನರೇಗಾ ಯೊಜನೆಯಡಿ ಗ್ರಾಮಗಳ ಅಭಿವೃದ್ಧಿ ಸಾಧ್ಯವಿದ್ದು, ಇದು ಬೇಡಿಕೆ ಅಧಾರದಲ್ಲಿ ಕೊಡುವ ಉದ್ಯೋಗವಾಗಿರುವುದರಿಂದ, ಜನರಿಗೂ ಕೆಲಸ ದೊರೆತು, ಗ್ರಾಮಗಳೂ ಅಭಿವೃದ್ಧಿ ಯಾಗಲು ಸಾಧ್ಯ ಎಂದರು. ಸಾರ್ವಜನಿಕರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಹಲವಾರು  ಯೋಜನೆಗಳನ್ನು ಜಾರಿಗೊಳಿಸುತ್ತದೆ.  ಈ ಎಲ್ಲ ಯೋಜನೆಗಳ ಬಗ್ಗೆ ಜನರು ಅರಿತುಕೊಳ್ಳಬೇಕು.  ಗ್ರಾಪಂ ಗಳಲ್ಲಿ ಗ್ರಾಮ ಸಭೆಗಳನ್ನು ಸಮರ್ಪಕವಾಗಿ ನಡೆಸಬೇಕು.

ಸರ್ಕಾರದ ಯಾವುದೇ ಯೋಜನೆ ಇರಲಿ, ಅದು ಕಟ್ಟ ಕಡೆಯ ವ್ಯಕ್ತಿಗೆ ತಲುಪಿದಾಗಲೆ ಆ ಯೋಜನೆ ಯಶಸ್ವಿಯಾಗಲು ಹಾಗೂ ಸರ್ಕಾರದ ಉದ್ದೇಶ ಈಡೇರಲು ಸಾಧ್ಯ.  ಕೆಳ ಹಂತದ ಅಧಿಕಾರಿಗಳಿಂದ ಗ್ರಾಮಗಳ ಜನರ ಸಮಸ್ಯೆ ಅರಿಯುವ ಬದಲಿಗೆ, ಜಿಲ್ಲಾಧಿಕಾರಿಗಳೇ ಗ್ರಾಮಗಳಿಗೆ ತೆರಳಿ, ಜನರೊಂದಿಗೆ ಸಂವಾದ ನಡೆಸಿ, ಅವರ ಸಮಸ್ಯೆಗಳು, ಅಹವಾಲುಗಳನ್ನು ಆಲಿಸಿ, ಸಾಧ್ಯವಾದಷ್ಟು ಸ್ಥಳೀಯವಾಗಿಯೇ ಸಮಸ್ಯೆ ಪರಿಹರಿಸುವ ಸಲುವಾಗಿಯೇ ಸರ್ಕಾರ ಜಿಲ್ಲಾಧಿಕಾರಿಗಳ ನಡೆ, ಹಳ್ಳಿಯ ಕಡೆ ಕಾರ್ಯಕ್ರಮವನ್ನು ಜಾರಿಗೆ ತಂದಿದೆ.

ಈ ಕಾರ್ಯಕ್ರಮದಲ್ಲಿ ಸುಮಾರು 50 ಕ್ಕೂ ಅರ್ಜಿಗಳು ಸ್ವೀಕೃತಗೊಂಡಿದ್ದು, ಬಹುತೇಕ ಅರ್ಜಿಗಳು ನಿವೇಶನಕ್ಕೆ ಸಂಬಂಧಿಸಿವೆ.  ಗ್ರಾಮದಲ್ಲಿನ ನಿವೇಶನ ರಹಿತರ ಪಟ್ಟಿಯನ್ನು ಹಾಗೂ ಅಗತ್ಯವಿರುವ ಜಮೀನಿನ ಬಗ್ಗೆ ವಿವರವಾದ ಪ್ರಸ್ತಾವನೆಯನ್ನು ಗ್ರಾ.ಪಂ. ಪಿಡಿಒ ತಯಾರಿಸಿ, ಸಲ್ಲಿಸಿದಲ್ಲಿ, ನಿಯಮಾನುಸಾರ ನಿವೇಶನ ಒದಗಿಸಿ, ಸರ್ಕಾರದ ವಿವಿಧ ಯೋಜನೆಗಳಡಿ ಅವರಿಗೆ ಮನೆಯನ್ನು ಕೂಡ ನಿರ್ಮಿಸಿಕೊಡಲಾಗುವುದು, ಅಲ್ಲದೆ ಕಾರ್ಯಕ್ರಮದಲ್ಲಿ ಸ್ವೀಕೃತಿಗೊಂಡಿರುವ ಎಲ್ಲ ಅರ್ಜಿಗಳನ್ನು ಕಾನೂನು ಚೌಕಟ್ಟಿನಲ್ಲಿ ಪರಿಹರಿಸಿಕೊಡಲು, ಹಾಗೂ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ, ಅರ್ಜಿಗಳಿಗೆ ಶೀಘ್ರ ಪರಿಹಾರ  ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕೆಎಸ್‍ಆರ್‍ಟಿಸಿ ಅಧ್ಯಕ್ಷ ಹಾಗೂ ಹೊಳಲ್ಕೆರೆ ಶಾಸಕ ಚಂದ್ರಪ್ಪ ಅವರು, ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವು ಸರ್ಕಾರದ ಅತಿ ಉಪಯುಕ್ತ ಕಾರ್ಯಕ್ರಮವಾಗಿದ್ದು, ಇದರಿಂದ ಗ್ರಾಮಗಳಲ್ಲಿ ಸರ್ಕಾರದ ವಿವಿಧ ಯೋಜನೆಗಳು, ಸೇವೆಗಳು, ಪಹಣಿ ತಿದ್ದುಪಡಿ, ಜಮೀನು ಹದ್ದುಬಸ್ತು, ಸ್ಮಶಾನ ಮುಂತಾದ ಸಮಸ್ಯೆಗಳು ತ್ವರಿತವಾಗಿ ಪರಿಹಾರವಾಗುತ್ತಿವೆ.  ಕ್ಷೇತ್ರದಲ್ಲಿನ ಗ್ರಾಮಗಳನ್ನು ಸಂಪರ್ಕಿಸುವ ಕಡೆಗಳಲ್ಲಿ ಮಣ್ಣಿನ ರಸ್ತೆಯನ್ನು ಇಲ್ಲವಾಗಿಸಿ, ಸಿಸಿ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾಮದ ಸ್ಮಶಾನಕ್ಕೆ ಸಂಬಂಧಿಸಿದಂತೆ ಒತ್ತುವರಿಯಾಗಿದ್ದು, ಸಮಸ್ಯೆ ಪರಿಹರಿಸಿಕೊಡುವಂತೆ ಸಾರ್ವಜನಿಕರು ಮನವಿ ಮಾಡಿಕೊಂಡರು, ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಕೂಡಲೆ ಸ್ಥಳ ಭೇಟಿ ನೀಡಿ, ದಾಖಲೆಗಳನ್ನು ಪರಿಶೀಲಿಸಿ, ತ್ವರಿತವಾಗಿ ಇತ್ಯರ್ಥಪಡಿಸಿ, ಸ್ಮಶಾನ ಭೂಮಿಯನ್ನು ಗ್ರಾಮ ಪಂಚಾಯತ್‍ಗೆ ಹಸ್ತಾಂತರಿಸುವಂತೆ ತಹಸಿಲ್ದಾರ್ ಸತ್ಯನಾರಾಯಣ ಅವರಿಗೆ ಸ್ಥಳದಲ್ಲಿಯೇ ಸೂಚನೆ ನೀಡಿದರು.

ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಮನವಿ ಸಲ್ಲಿಸಿದ ಜನರಿಗೆ ಉತ್ತರಿಸಿದ ಜಿಲ್ಲಾಧಿಕಾರಿಗಳು ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ಗಂಗೆ ಕಾರ್ಯಕ್ರಮವನ್ನು ಒಟ್ಟು ನಾಲ್ಕು ಹಂತಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.  ಆದಷ್ಟು ತ್ವರಿತವಾಗಿ ಎಲ್ಲರ ಮನೆಗೆ ನಳದ ಸಂಪರ್ಕ ಒದಗಿಸಲಾಗುವುದು ಎಂದರು.

ವಿಧವಾ ವೇತನ, ಸಂಧ್ಯಾಸುರಕ್ಷಾ ಸೇರಿದಂತೆ ವಿವಿಧ ಮಾಸಾಶನ ತೊಂದರೆ ಕುರಿತು ಸಲ್ಲಿಸಿದ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ತಮ್ಮ ಅರ್ಜಿಯನ್ನು ಪರಿಶೀಲಿಸಿ, ಒಂದು ವಾರದೊಳಗೆ ಮಾಸಾಶನ ಬರುವಂತೆ ಮಾಡಲಾಗುವುದು ಎಂದರು.

ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಶಾಸಕ ಚಂದ್ರಪ್ಪ ಅವರು ಗ್ರಾಮದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ, ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು.  ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಜರುಗಿದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಗರ್ಭಿಣಿಯರಿಗೆ ಆರತಿ ಬೆಳಗಿ ಸೀಮಂತ ಕಾರ್ಯ ನಡೆಸಿದರು. ಸುಕನ್ಯಾ ಸಮೃದ್ಧಿ ಯೋಜನೆಯ ಫಲಾನುಭವಿಗಳಿಗೆ ಪಾಸ್‍ಬುಕ್ ವಿತರಣೆ,  ಪೋಷಣ್ ಅಭಿಯಾನದಡಿ ಮಕ್ಕಳಿಗೆ ಪೌಷ್ಠಿಕ ಆಹಾರವುಳ್ಳ ಅನ್ನಪ್ರಾಶನ ಮಾಡಿಸಿದರು.  ವಿಕಲಚೇತನರ ಕಲ್ಯಾಣ ಇಲಾಖೆಯಿಂದ ವಿಕಲಚೇತನರಿಗೆ ಸಾಧನ ಸಲಕರಣೆಗಳನ್ನು ಇದೇ ಸಂದರ್ಭದಲ್ಲಿ ವಿತರಿಸಿದರು.

ಕಾರ್ಯಕ್ರಮದ ಅಂಗವಾಗಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಕಲಾನಿಕೇತನ ಕಲಾತಂಡವು ಅಸ್ಪøಷ್ಯತೆ ನಿವಾರಣೆ ಕುರಿತ ಜನಜಾಗೃತಿ ನಾಟಕವನ್ನು ಪ್ರಸ್ತುತಪಡಿಸಿತು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ದೇವರಾಜ್, ಜಿ.ಪಂ. ಉಪಕಾರ್ಯದರ್ಶಿ ಡಾ. ರಂಗಸ್ವಾಮಿ, ಡಿಹೆಚ್‍ಒ ಡಾ. ರಂಗನಾಥ್, ಡಿಡಿಪಿಐ ರವಿಶಂಕರ್ ರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯತ್ ಸದಸ್ಯರುಗಳು ಉಪಸ್ಥಿತರಿದ್ದರು.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಉದ್ಯೋಗ ವಾರ್ತೆ : ಜನವರಿ 24 ರಂದು ನೇರ ಸಂದರ್ಶನ

ಸಿಂದಗಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಿಧನ : ದುಃಖದಲ್ಲಿ ಕುಮಾರಸ್ವಾಮಿ..!