ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜನವರಿ. 12 : ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಜನಸಂಖ್ಯೆಯಲ್ಲಿ ಬಹುಸಂಖ್ಯಾತರಾಗಿರುವ ಬಂಜಾರ(ಲಂಬಾಣಿ) ಜನಾಂಗದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ
ರುದ್ರಪ್ಪ ಮಾನಪ್ಪ ಲಮಾಣಿಯವರಿಗೆ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ ಮತ್ತು ಮುಖ್ಯಮಂತ್ರಿ
ಸಿದ್ದರಾಮಯ್ಯನವರಿಗೆ ಕರ್ನಾಟಕ ಬಂಜಾರ ಜನಜಾಗೃತಿ ಅಭಿಯಾನ ಸಮಿತಿ ಒತ್ತಾಯಿಸಿತು.
ಪ್ರವಾಸಿ ಮಂದಿರದಲ್ಲಿ ಭಾನುವಾರ ಸಭೆ ಸೇರಿದ್ದ ಬಂಜಾರ ಜನಜಾಗೃತಿ ಅಭಿಯಾನ ಸಮಿತಿಯ ಪದಾಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆ.ಪಿ.ಸಿ.ಸಿ. ಅಧ್ಯಕ್ಷರನ್ನು ಆಗ್ರಹಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಬಂಜಾರ ಜನಜಾಗೃತಿ ಅಭಿಯಾನ ಸಮಿತಿಯ ಗೌರವಾಧ್ಯಕ್ಷ ರಾಘವೇಂದ್ರನಾಯ್ಕರವರು ಬಂಜಾರ ಲಂಬಾಣಿ ಜನಾಂಗ ಕಳೆದ ಬಾರಿ ನಡೆದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ನಾಯಕತ್ವದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದು, ಲಂಬಾಣಿ ಜನಾಂಗದಿಂದ
ಕಾಂಗ್ರೆಸ್ ಪಕ್ಷದಲ್ಲಿ ರುದ್ರಪ್ಪ ಲಮಾಣಿರವರು ಏಕೈಕ ಶಾಸಕರಾಗಿ ಆಯ್ಕೆಯಾಗಿ ಬಂದಿದ್ದಾರೆ. ಪರಿಶಿಷ್ಟ ಜಾತಿಯಲ್ಲಿ ಬಹುಸಂಖ್ಯಾತರಾದ ಲಂಬಾಣಿ ಜನಾಂಗದ ಶಾಸಕರನ್ನು ಕಡೆಗಣಿಸಿರುವುದು ಅನ್ಯಾಯ. ಆದ್ದರಿಂದ ಈ ಬಾರಿಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿ. ಸೇರಿ ಕಾಂಗ್ರೆಸ್ ಹೈಕಮಾಂಡ್ ಒಂದು ನಿರ್ಧಾರಕ್ಕೆ ಬಂದು ರುದ್ರಪ್ಪ ಲಮಾಣಿರವರಿಗೆ ಸಚಿವ ಸಂಪುಟದಲ್ಲಿ ಸೇರ್ಪಡೆ ಮಾಡಿಕೊಳ್ಳಬೇಕೆಂದು ಇಡಿ ಬಂಜಾರ ಸಮುದಾಯ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳಿಗೆ ಒತ್ತಾಯಿಸುತ್ತದೆಂದರು.
ಕಾಂಗ್ರೆಸ್ ಪಕ್ಷದ ಸಂಪ್ರದಾಯಿಕ ಮತದಾರರೆಂದು ಪರಿಗಣಿಸಲ್ಪಟ್ಟಿರುವ ಲಂಬಾಣಿ ಸಮುದಾಯಕ್ಕೆ ಈ ಹಿಂದಿನಿಂದಲೂ ರಾಜ್ಯಸಭೆ, ಕೆ.ಪಿ.ಸಿ.ಸಿ. ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಕಾಂಗ್ರೆಸ್ ಪರಿಗಣನೆಗೆ ತೆಗೆದುಕೊಂಡಿತ್ತು. ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್ ಹೈಕಮಾಂಡ್ ಬಂಜಾರ(ಲಂಬಾಣಿ) ಜನಾಂಗವನ್ನು ಅಧಿಕಾರದಿಂದ ಕಡೆಗಣಿಸಿ ಯಾವುದೇ ಸ್ಥಾನಮಾನ ನೀಡದೆ ನಿರ್ಲಕ್ಷಿಸಿರುವುದಕ್ಕೆ ಬಂಜಾರ ಸಮುದಾಯ ತೀವ್ರ ಅಸಮಾಧಾನಗೊಂಡಿದೆ.
ರುದ್ರಪ್ಪ ಮಾನಪ್ಪ ಲಮಾಣಿರವರಿಗೆ ವಿಧಾನಸಭೆ ಉಪ ಸಭಾಧ್ಯಕ್ಷ ಸ್ಥಾನ ನೀಡಿ ಸಮಾಧಾನಪಡಿಸಿರುವುದರಿಂದ ಲಂಬಾಣಿ ಸಮುದಾಯಕ್ಕೆ ಯಾವುದೆ ರೀತಿಯ ನೆರವು ದೊರೆಯುವುದಿಲ್ಲ. ಆದ್ದರಿಂದ ಈ ಬಾರಿಯ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಲಂಬಾಣಿ ಜನಾಂಗವನ್ನು ಕಡೆಗಣಿಸದೆ
ಸಚಿವ ಸ್ಥಾನಮಾನ ನೀಡಿ ರಾಜಕೀಯ ಪ್ರಾತಿನಿಧ್ಯ ಕೊಡಬೇಕೆಂದು ರಾಘವೇಂದ್ರನಾಯ್ಕ ಮನವಿ ಮಾಡಿದರು.
ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಯ ಪ್ರಧಾನ ಕಾರ್ಯದರ್ಶಿ ನರೇನಹಳ್ಳಿ ಅರುಣ್‍ಕುಮಾರ್ ಮಾತನಾಡಿ ಬಂಜಾರ ಸಮುದಾಯಕ್ಕೆ ರಾಜ್ಯಸಭೆ, ವಿಧಾನಪರಿಷತ್ ಮತ್ತು ನಿಗಮ ಮಂಡಳಿಗಳಿಗೆ ಅವಕಾಶ ಕಲ್ಪಿಸಿಕೊಡುವ ಮೂಲಕ ಸೂಕ್ತ ಪ್ರಾತಿನಿಧ್ಯ ನೀಡಬೇಕು. ಮತ್ತು ರಾಜ್ಯದ ಯಾವುದಾದರೂ ವಿಶ್ವವಿದ್ಯಾಲಯಕ್ಕೆ ಈ ಜನಾಂಗದವರನ್ನು ಕುಲಪತಿಯನ್ನಾಗಿ ನೇಮಕ ಮಾಡಬೇಕೆಂದು ಒತ್ತಾಯಿಸಿದರು.
ಲಂಬಾಣಿ ತಾಂಡಾಗಳಿಂದ ಜೀವನೋಪಾಯಕ್ಕಾಗಿ ವಲಸೆ ಹೋಗುವಂತ ಪದ್ದತಿಯಿದ್ದು, ವಲಸೆ ಪದ್ದತಿ ನಿರ್ಮೂಲನೆಗೆ ಆಯಾ ತಾಂಡಗಳಲ್ಲಿ ನಿರುದ್ಯೋಗಿ ಯುವಜನರು ಮತ್ತು ಮಹಿಳೆಯರಿಗೆ ಉದ್ಯೋಗ ಕಲ್ಪಿಸುವಂತ ಕ್ರಿಯಾ ಯೋಜನೆಯನ್ನು ರಾಜ್ಯ ಸರ್ಕಾರ ಮುಂಬರು ಬಜೆಟ್‍ನಲ್ಲಿ ಘೋಷಿಸಬೇಕಾದ ಅನಿವಾರ್ಯತೆಯಿದೆ ಎಂದು ಹೇಳಿದರು.
ಮುಖ್ಯಮಂತ್ರಿಗಳಿಗೆ ಅಭಿನಂದನೆ : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‍ರವರು ಸಂತ ಸೇವಾಲಾಲ್‍ರವರ ಹೆಸರಿನಲ್ಲಿ
ಈ ವರ್ಷದಿಂದ ಪ್ರಶಸ್ತಿಯನ್ನು ನೀಡುತ್ತಿರುವುದಕ್ಕೆ ಮತ್ತು ಪ್ರಶಸ್ತಿ ಸ್ಥಾಪನೆಗೆ ಕಾರಣಿಭೂತರಾದ ವಿಧಾನಸಭೆ ಉಪ ಸಭಾಪತಿ ರುದ್ರಪ್ಪ ಮಾನಪ್ಪ ಲಮಾಣಿ ಹಾಗೂ ಕನ್ನಡ ಸಂಸ್ಕøತಿ ಇಲಾಖೆ ಸಚಿವ ಶಿವರಾಜ್ ತಂಗಡಿಯವರಿಗೆ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಅಭಿನಂದನೆ ಸಲ್ಲಿಸುತ್ತದೆ ಎಂದು ತಿಳಿಸಿದರು.
ಜನಾಂಗದ ಮುಖಂಡರ ಸಭೆಯಲ್ಲಿ ಕರ್ನಾಟಕ ಬಂಜಾರ ಜನಜಾಗೃತಿ ಅಭಿಯಾನ ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್.ನಿಂಗಾನಾಯ್ಕ, ತಾಂಡ ರಕ್ಷಣಾ ವೇದಿಕೆ ಉಪಾಧ್ಯಕ್ಷ ಅನಂತಮೂರ್ತಿನಾಯ್ಕ, ಪ್ರಧಾನ ಕಾರ್ಯದರ್ಶಿ ರಮೇಶ್, ನಿವೃತ್ತ ಪ್ರಾಚಾರ್ಯರಾದ ಪಾಲಾಕ್ಷನಾಯ್ಕ, ಜಯಣ್ಣನಾಯ್ಕ, ರಮೇಶ್ ಎಲ್. ಐನಳ್ಳಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಕುಮಾರ್‍ನಾಯ್ಕ, ತಿಪ್ಪೇಶ್‍ನಾಯ್ಕ, ಶಿವರಾಜ್‍ನಾಯ್ಕ, ಶಿವಪ್ರಸಾದ್ ಎಂ. ಡಾ.ಕರಿಬಸಪ್ಪ ಇವರುಗಳು ಸಭೆಯಲ್ಲಿದ್ದರು.