ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ,(ಮೇ.19) : ಕಳೆದ ಹತ್ತರಂದು ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಗೆದ್ದಿರುವ ಲಂಬಾಣಿ ಬಂಜಾರ ಸಮಾಜದ ಏಕೈಕ ಶಾಸಕ ರುದ್ರಪ್ಪ ಲಮಾಣಿಗೆ ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಿ ಸಮಾಜ ಕಲ್ಯಾಣ ಖಾತೆ ಕೊಡಬೇಕೆಂದು ಜಿಲ್ಲಾ ಲಂಬಾಣಿ ಬಂಜಾರ ಸಮಾಜದ ಜಿಲ್ಲಾಧ್ಯಕ್ಷ ಎಂ.ಸತೀಶ್‍ಕುಮಾರ್ ಪಕ್ಷದ ನಾಯಕರುಗಳಲ್ಲಿ ಮನವಿ ಮಾಡಿದ್ದಾರೆ.
ಮಾಧ್ಯಮದೊಂದಿಗೆ ಶುಕ್ರವಾರ ಮಾತನಾಡಿದ ಅವರು ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ರುದ್ರಪ್ಪ ಲಮಾಣಿಯನ್ನು ಮುಜರಾಯಿ ಖಾತೆ ಸಚಿವರನ್ನಾಗಿ ಮಾಡಿತ್ತು. ಪ್ರತಿ ಚುನಾವಣೆಯಲ್ಲಿಯೂ ಬಂಜಾರ ಸಮಾಜ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿಕೊಂಡು ಬರುತ್ತಿದೆ.
ಈ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಲು ಲಂಬಾಣಿ ಸಮಾಜ ಅಧಿಕ ಮತಗಳನ್ನು ನೀಡಿದೆ. ಮುಂದೆಯೂ ಕಾಂಗ್ರೆಸ್ ಜೊತೆ ನಮ್ಮ ಸಮಾಜ ಇರಬೇಕೆಂದರೆ ಸಮಾಜ ಕಲ್ಯಾಣ ಖಾತೆ ನೀಡಲೇಬೇಕು.
ಒಳ ಮಿಸಲಾತಿ ವರ್ಗಿಕರಣಗೊಳಿಸಿದ್ದರಿಂದ ಬಿಜೆಪಿಗೆ ಲಂಬಾಣಿ ಜನಾಂಗ ಚುನಾವಣೆಯಲ್ಲಿ ಮುಟ್ಟಿ ನೋಡಿಕೊಳ್ಳುವಂತ ಹೊಡೆತ ಕೊಟ್ಟಿದೆ. ಹಾಗಾಗಿ ನಮ್ಮ ಬೇಡಿಕೆಯನ್ನು ಕಾಂಗ್ರೆಸ್ ವರಿಷ್ಠರು ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದಲ್ಲಿ ಮುಂದೆ ಏನು ಮಾಡಬೇಕೆನ್ನುವುದು ನಮ್ಮ ಜನಾಂಗಕ್ಕೆ ಗೊತ್ತಿದೆ ಎಂದು ಎಚ್ಚರಿಸಿದರು.
ಚಳ್ಳಕೆರೆ ವಿಧಾನಸಭಾ ಕ್ಷೇತ್ರದಿಂದ ಮೂರನೇ ಬಾರಿಗೆ ಗೆದ್ದಿರುವ ಅಭಿವೃದ್ದಿಯ ಹರಿಕಾರ ಶಾಸಕ ಟಿ.ರಘುಮೂರ್ತಿಗೆ ಸಚಿವ ಸ್ಥಾನ ಕೊಡಬೇಕೆಂದು ಎಂ.ಸತೀಶ್‍ಕುಮಾರ್ ಒತ್ತಾಯಿಸಿದರು.