ಮಕ್ಕಳ ಕೈಗೆ ಮೊಬೈಲ್ ಬದಲು ಪುಸ್ತಕ ಕೊಡಿ :  ಸಾಹಿತಿ ದಯಾ ಪುತ್ತೂರ್ಕರ್ ಕಿವಿ ಮಾತು

2 Min Read

 

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.05 :  ಮನೆಯಲ್ಲಿ ಹಿರಿಯರು ಧಾರಾವಾಹಿ ನೋಡುವ ಸಲುವಾಗಿ ಮಕ್ಕಳ ಕೈಗೆ ಮೊಬೈಲ್ ಕೊಡುತ್ತಾರೆ. ಇದರಿಂದ ಮಕ್ಕಳು ಮೊಬೈಲ್ ಗೀಳಾಗಿ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಅದರ ಬದಲು ಪುಸ್ತಕ ಕೊಡಿ ಎಂದು ಸಾಹಿತಿ ದಯಾ ಪುತ್ತೂರ್ಕರ್ ಪೋಷಕರಿಗೆ ಕಿವಿ ಮಾತು ಹೇಳಿದರು.

ಈ ಕಾರ್ಯಕ್ರಮವನ್ನು ಚಿಕ್ಕಪ್ಪ ಮತ್ತು ವೇದಿಕೆಯ ಮೇಲಿನ ಎಲ್ಲ ಗಣ್ಯ ಮಾನ್ಯರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.  ಶಾಲೆಯಲ್ಲಿ ನಡೆದ ಕ್ರೀಡಾಕೂಟದ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನವಾಗಿ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

ತಾಲ್ಲೂಕಿನ ಭರಮಸಾಗರ ಹೋಬಳಿಯ ಲಿಟ್ಲ್ ಏಂಜಲ್ಸ್ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಕರ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಮಕ್ಕಳಿಗೆ ರಾಮಾಯಣ ಮತ್ತು ಮಹಾಭಾರತದಲ್ಲಿ ಬರುವ ಉಪಕಥೆಗಳನ್ನು, ನೀತಿ ಕಥೆಗಳನ್ನು ಹೇಳಿ ಮಕ್ಕಳಲ್ಲಿ ಅದಮ್ಯ ಚೈತನ್ಯ ಮತ್ತು ಜೀವನ ಅನುಭವ ತುಂಬಲು ಪ್ರಯತ್ನಿಸಬೇಕು. ‌ಹಿಂದಿನ ಕಾಲದಲ್ಲಿ ಶಾಲೆಗೆ ರಜೆ ಸಿಕ್ಕರೆ ಸಾಕು ಮಕ್ಕಳು ಅಜ್ಜಿ ಮನೆಗೆಂದು ಓಡುತ್ತಿದ್ದರು. ತೋಟ ಸುತ್ತುವುದು, ಮರ ಹತ್ತುವುದು, ಬೆಟ್ಟಗುಡ್ಡಗಳ ಹತ್ತಿ ಇಳಿಯುವುದು, ಕೆರೆಯಲ್ಲಿ ಈಜಾಡುವುದು, ದೈಹಿಕ ಮತ್ತು ಮಾನಸಿಕ ಆರೋಗ್ಯದ ವಾತಾವರಣವಿತ್ತು. ಆದರೆ ಈಗಿನ ಮಕ್ಕಳಿಗೆ ಶಾಲೆಗೆ ರಜೆ ಎಂದರೆ ಸಾಕು ಮೊಬೈಲ್ ಹಿಡಿದು ಕುಳಿತಿರುತ್ತಾರೆ. ಅಜ್ಜಿ ಮನೆಯನ್ನು ಇಷ್ಟಪಡುವುದಿಲ್ಲ ಏಕೆಂದರೆ ಅಲ್ಲಿ ಇಂಟರ್ನೆಟ್ ಸಿಗುವುದಿಲ್ಲ ಎಂದು
ಈ ಮನೋಭಾವದಿಂದ ಮಕ್ಕಳನ್ನು ಹೊರತಂದು ಪುಸ್ತಕಗಳನ್ನು ಓದುವ ಅಭ್ಯಾಸವನ್ನು ಬೆಳೆಸಿರಿ ಎಂದು ಹೇಳಿದರು.

ಶಿಕ್ಷಣದ ಜೊತೆ ಮನೆಯ ವಾತಾವರಣವೂ ಮುಖ್ಯವಾಗಿರಬೇಕು. ಮನೆಯಿಂದ ಶಾಲೆಗೆ ಹೊರಡುವ ಮಗುವಿನ ಮನಸ್ಸು ಉಲ್ಲಾಸ ಭರಿತವಾಗಿದ್ದರೆ ಮಾತ್ರ ಮಗು ಗಮನ ಕೊಟ್ಟು ಪಾಠ ಕೇಳಲು ಸಾಧ್ಯ. ಆದ್ದರಿಂದ ಮಗುವಿನ  ಎದುರೇ ಜಗಳವಾಡುವುದು, ಹೊಡೆದಾಡುವುದು ಆಗಬಾರದು. ಇದು ಮಗುವಿನ ನಿರ್ಮಲವಾದ ಮನಸ್ಸಿಗೆ ಆಘಾತವನ್ನುoಟು ಮಾಡುತ್ತದೆ.

ಸ್ವಲ್ಪ ಸಮಯವಾದರೂ ಮನೆಯಲ್ಲಿ ಹಿರಿಯರು ಮಗುವಿನ ಜೊತೆ ಸಮಯ ಕಳೆಯಬೇಕು. ಶಾಲೆಯಲ್ಲಿ ಮಾಡಿದ ಪಾಠದ ಬಗ್ಗೆ ಗೆಳೆಯರ ಬಗ್ಗೆ ಮನೆ ಪಾಠದ ಬಗ್ಗೆ ಎಲ್ಲವನ್ನು ಮಕ್ಕಳ ಜೊತೆ ಚರ್ಚಿಸಿದಾಗ ಮಗುವಿನಲ್ಲಿ ಅದಮ್ಯ ಚೈತನ್ಯ ಮೂಡುತ್ತದೆ. ಮನೆಯವರ ಮತ್ತು ಮಕ್ಕಳ ಮಧ್ಯೆ ಉತ್ತಮ ಬಾಂಧವ್ಯ ಬೆಸೆಯುತ್ತದೆ ಎಂದರು.

ನಂತರ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯಲ್ಲಿ ಶ್ರೀಮತಿ ನಿರ್ಮಲ ಮಂಜುನಾಥ್ ರವರು ಮಾತನಾಡುತ್ತಾ,
ನಮ್ಮ ಮಕ್ಕಳು  ಇಂಜಿನಿಯರ್, ಡಾಕ್ಟರ್
ಆಗಬೇಕೆಂದು ಬಯಸಬೇಡಿ. ಅವರಿಗೆ ಯಾವ ವಿಷಯದಲ್ಲಿ ಆಸಕ್ತಿ ಇರುತ್ತದೆ ಅದರಲ್ಲಿ ಪ್ರೋತ್ಸಾಹಿಸಿ ಎಂದರು.

ಶಾಲೆಯ ಕಾರ್ಯದರ್ಶಿಗಳಾದ ಕೆ.ಎನ್. ಬಸವನಗೌಡ ರವರು ಶಾಲೆಯ ಮಕ್ಕಳ ಏಳಿಗೆಗೆ ಪೋಷಕರು ಕೈಗೂಡಿಸಿ ಎಂದು ವಿನಂತಿಸಿದರು. ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಭೋಜರಾಜ್ ರವರು ವಹಿಸಿದ್ದರು. ಸಾಧನ ರವರು ಪ್ರಾರ್ಥಿಸಿದರು.
ಪವಿತ್ರರವರು ಕಾರ್ಯಕ್ರಮ ನಿರೂಪಿಸಿದರು.
ಶಿಲ್ಪ ರವರು ವಂದಿಸಿದರು.

Share This Article
Leave a Comment

Leave a Reply

Your email address will not be published. Required fields are marked *