ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಏ.25) : ರಾಜ್ಯದಲ್ಲಿ ಸ್ವಚ್ಚ ಹಾಗೂ ಪಾರದರ್ಶಕ ಆಡಳಿತಕ್ಕಾಗಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಠ ಬಹುಮತ ನೀಡಿ ಅಧಿಕಾರಕ್ಕೆ ತರುವಂತೆ ಎ.ಐ.ಸಿ.ಸಿ. ಮಾಧ್ಯಮ ವಕ್ತಾರ ಡಾ. ಅನ್ಸುಲ್ ಅವಿಜಿತ್ ಮನವಿ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರ ಪೆಟ್ರೋಲ್-ಡೀಸೆಲ್ ಅಗತ್ಯ ವಸ್ತುಗಳ ಬೆಲೆ ಏರಿಸಿ ಜನಸಾಮಾನ್ಯರನ್ನು ತತ್ತರಿಸುವಂತೆ ಮಾಡಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ. ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿರುವುದರಿಂದ ಜನ ರೋಸಿ ಹೋಗಿ ಬದಲಾವಣೆ ಬಯಸುತ್ತಿದ್ದಾರೆ. ಹಾಗಾಗಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ ಎಂದು ಹೇಳಿದರು.
ಪದವೀಧರ ಯುವಕರು ಉದ್ಯೋಗವಿಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ 2.5 ಲಕ್ಷ ಹುದ್ದೆಗಳು ಖಾಲಿಯಿವೆ. ಪೊಲೀಸ್ ಸಬ್‍ಇನ್ಸ್‍ಪೆಕ್ಟರ್‍ಗಳ ನೇಮಕಾತಿಯಲ್ಲಿಯೂ ಹಗರಣವಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಸ್ಕಾಲರ್‍ಶಿಪ್ ನಿಂತಿದೆ.
ಬಜೆಟ್‍ನಲ್ಲಿ ಎಸ್ಸಿ. ಎಸ್ಟಿ.ಗಳಿಗೆ ಅನ್ಯಾಯವೆಸಗಿದೆ. ಬೆಲೆ ಹೆಚ್ಚಿಸಿ ಅದರಿಂದ ಬರುವ ಹಣವನ್ನು ಪ್ರಧಾನಿ ಮೋದಿ ಸಿರಿವಂತರಿಗೆ ಬಳಸುತ್ತಿದ್ದಾರೆಂದು ಕಿಡಿ ಕಾರಿದರು.
ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳು ಮೂರು ಸಾವಿರ ರೂ. ಹಾಗೂ ಡಿಪ್ಲಮೋ ಪಡೆದವರಿಗೆ ತಿಂಗಳಿಗೆ ಒಂದುವರೆ ಸಾವಿರ ರೂ.ಗಳನ್ನು ಎರಡು ವರ್ಷಗಳ ಕಾಲ ನೀಡಲಾಗುವುದು.
ಬಿ.ಪಿ.ಎಲ್.ಕುಟುಂಬಗಳಿಗೆ ಪ್ರತಿ ತಿಂಗಳು ಹತ್ತು ಕೆ.ಜಿ.ಅಕ್ಕಿ ಉಚಿತವಾಗಿ ವಿತರಿಸಲಾಗುವುದು. ಗೃಹಜ್ಯೋತಿ ಯೋಜನೆಯಡಿ ಇನ್ನೂರು ಯೂನಿಟ್ ವಿದ್ಯುತ್ ಫ್ರೀ, ಅಡುಗೆ ಅನಿಲ ಬೆಲೆ ಏರಿಕೆ ಹಾಗೂ ಜಿ.ಎಸ್.ಟಿ.ಯಿಂದ ತತ್ತರಿಸಿರುವ ಪ್ರತಿ ಮನೆಯ ಒಡತಿ ಬ್ಯಾಂಕ್ ಖಾತೆಗೆ ತಿಂಗಳಿಗೆ ಎರಡು ಸಾವಿರ ರೂ.ಗಳನ್ನು ಉಚಿತವಾಗಿ ಜಮ ಮಾಡಲಾಗುವುದು. ರೈತ ವಿರೋಧಿ, ಜನ ವಿರೋಧಿ, ಬಡವರ ವಿರೋಧಿ ಬಿಜೆಪಿ.ಸರ್ಕಾರವನ್ನು ಕಿತ್ತೆಸೆದು ಕಾಂಗ್ರೆಸ್ ಸರ್ಕಾರವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವಂತೆ ವಿನಂತಿಸಿದರು.
ಕೆ.ಪಿ.ಸಿ.ಸಿ. ಮಾಧ್ಯಮ ವಕ್ತಾರ ಬಾಲಕೃಷ್ಣಸ್ವಾಮಿ ಯಾದವ್ ಮಾತನಾಡಿ ಪ್ರಿಯಾಂಕ ಗಾಂಧಿ ಬುಧವಾರ ಮಧ್ಯಾಹ್ನ 1-40 ಕ್ಕೆ ಹಿರಿಯೂರಿನ ಹುಳಿಯಾರು ರಸ್ತೆಯಲ್ಲಿರುವ ಸ್ಟೇಡಿಯಂಗೆ ಆಗಮಿಸಿ ನಂತರ 2-30 ಕ್ಕೆ ಚಿತ್ರದುರ್ಗ, ತುಮಕೂರು ಜಿಲ್ಲೆಗಳ ಬುಡಕಟ್ಟು ಕಾಡುಗೊಲ್ಲ ಜನಾಂಗದ ನೂರು ಪ್ರಮುಖರೊಂದಿಗೆ ಸಂವಾದ ನಡೆಸಿ ಅವರ ಕುಂದುಕೊರತೆ ಸಮಸ್ಯೆಗಳನ್ನು ಆಲಿಸುವರು. ಬಳಿಕ ಪಟ್ಟಣದ ಗಾಂಧಿವೃತ್ತದಿಂದ ರಂಜಿತ ಹೋಟೆಲ್‍ವರೆಗೆ ರೋಡ್ ಶೋ ನಡೆಸಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಹಾಗೂ ಚಿಕ್ಕನಾಯಕನಹಳ್ಳಿ, ಶಿರಾದ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತ ಯಾಚಿಸುವರು.
ಸಂಜಯ್‍ದತ್, ಮಯೂರ್ ಜೈಕುಮಾರ್, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಕಾರ್ಯಾಧ್ಯಕ್ಷ ಕೆ.ಎಂ. ಹಾಲೇಶಪ್ಪ ಇನ್ನು ಅನೇಕರು ಈ ಸಂದರ್ಭದಲ್ಲಿರುವರು ಎಂದು ಹೇಳಿದರು.
ಕೆ.ಪಿ.ಸಿ.ಸಿ. ಕಾರ್ಯನಿರ್ವಾಹಕ ಸಮಿತಿ ಸದಸ್ಯ ಹಾಗೂ ಬಳ್ಳಾರಿ ಉಸ್ತುವಾರಿ ಲಿಂಗರಾಜ್, ಮಲ್ಲೇಶ್, ಮುದಸಿರ್ ನವಾಜ್, ಎನ್.ಡಿ.ಕುಮಾರ್, ದೇವರಾಜ್, ಜಿಲ್ಲಾ ಕಾಂಗ್ರೆಸ್ ಸಮಿತಿ ಖಜಾಂಚಿ ಟಿ.ಎ.ಟಿ. ಪ್ರಭು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.