ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್,ಚಿತ್ರದುರ್ಗ, ಜನವರಿ. 09 : : ಫಾತಿಮ ಶೇಕ್ ಸಾವಿತ್ರಿಬಾಯಿ ಪುಲೆಗೆ ಶಿಕ್ಷಣ ಕಲಿಸಿದ ಮೊದಲ ಶಿಕ್ಷಕಿ ಎನ್ನುವುದು ಬಹಳಷ್ಟು ಮಂದಿಗೆ ಗೊತ್ತಿಲ್ಲ ಎಂದು ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿ ಗೌರವಾಧ್ಯಕ್ಷ, ಹಿರಿಯ ನ್ಯಾಯವಾದಿ ಬಿ.ಕೆ.ರಹಮತ್ವುಲ್ಲಾ ತಿಳಿಸಿದರು.
ಅಕಾಡೆಮಿಯ ಎಂಟನೆ ವರ್ಷಾಚರಣೆ ಹಾಗೂ ಫಾತಿಮ ಶೇಕ್ ಜನ್ಮದಿನದ ಅಂಗವಾಗಿ ಹೊರಪೇಟೆಯಲ್ಲಿರುವ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಬ್ಯಾಗ್ಗಳನ್ನು ವಿತರಿಸಿ ಮಾತನಾಡಿದರು.
ಹೆಣ್ಣು ಮಕ್ಕಳು ಫಾತಿಮ ಶೇಕ್ರಂತಾಗಬೇಕು. ಮನೆಯನ್ನು ಶಾಲೆಗೆ ಬಿಟ್ಟುಕೊಟ್ಟ ಫಾತಿಮ ಶೇಕ್ ಶಿಕ್ಷಣಕ್ಕೆ ಮೊದಲ ಆದ್ಯತೆ ಕೊಡುತ್ತಿದ್ದರು. ಪ್ರತಿಯೊಬ್ಬರಿಗೂ ತ್ಯಾಗ ಗುಣವಿದ್ದಾಗ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದರು.
ಉರ್ದು ಇ.ಸಿ.ಓ. ಸಮೀರ ಮಾತನಾಡಿ ತಾಲ್ಲೂಕಿನಲ್ಲಿ ಮೂವತ್ತು ಉರ್ದು ಶಾಲೆಗಳಿವೆ. ಒಂಬತ್ತು ಶಾಲೆಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಮತ್ತೊಂದು ಅಂಜುಮನ್ ರೂಂ.ನಲ್ಲಿ ನಡೆಯುತ್ತಿದೆ. ಮಕ್ಕಳ ಶಿಕ್ಷಣಕ್ಕೆ ಕಟ್ಟಡ ಆಕರ್ಷಣೆಯಾಗಿರಬೇಕೆಂದರೆ ಸ್ವಂತ ಕಟ್ಟಡವಿರಬೇಕು. ಫಾತಿಮ ಶೇಕ್ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದರು ಎಂದು ಸ್ಮರಿಸಿದರು.
ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಸಮಿತಿ ಸದಸ್ಯ ಮುದಾಸಿರ್ನವಾಜ್ ಮಾತನಾಡುತ್ತ ಫಾತಿಮ ಶೇಕ್ರವರ ಇತಿಹಾಸವನ್ನು ಇಂದಿನ ಮಕ್ಕಳಿಗೆ ತಿಳಿಸಬೇಕು. ಇತಿಹಾಸ ಮರೆಮಾಚಬಾರದು. ಸಾವಿತ್ರಿಬಾಯಿ ಪುಲೆಯನ್ನು ಹೇಗೆ ಎಲ್ಲರೂ ನೆನಪಿಸಿಕೊಳ್ಳುತ್ತಾರೋ ಅದೆ ರೀತಿ ಫಾತಿಮ ಶೇಕ್ರವರ ವಿಚಾರ ಎಲ್ಲೆಡೆ ಹರಡಬೇಕೆಂದು ಹೇಳಿದರು.
ಶಿಕ್ಷಕಿ ರೇಣುಕ ಮಾತನಾಡಿ ಮಕ್ಕಳಿಗೆ ಫಾತಿಮ ಶೇಕ್ ವಿಚಾರ ತಿಳಿಸುವ ಅಗತ್ಯವಿದೆ. ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಶಿಥಿಲವಾಗಿದೆ. ಮಳೆ ಬಂದರೆ ನೀರು ಒಳಗೆ ನುಗ್ಗುತ್ತದೆ. ಅಧಿಕಾರಿಗಳು ಇತ್ತ ಗಮನ ಹರಿಸಿ ದುರಸ್ಥಿಗೊಳಿಸುವಂತೆ ಮನವಿ ಮಾಡಿದರು.
ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿ ಅಧ್ಯಕ್ಷ ಎಂ.ಹನೀಫ್ ಮಾತನಾಡುತ್ತ ಮುಂದಿನ ದಿನಗಳಲ್ಲಿ ಈ ಶಾಲೆಯ ಎಲ್ಲಾ ಮಕ್ಕಳಿಗೂ ಬ್ಯಾಗ್ಗಳನ್ನು ವಿತರಿಸಲಾಗುವುದು. ಮಕ್ಕಳು ಫಾತಿಮ ಶೇಕ್ ವಿಚಾರಗಳನ್ನು ತಿಳಿದುಕೊಂಡು ಅವರಂತೆ ಸಮಾಜದಲ್ಲಿ ಕೀರ್ತಿ ಗಳಿಸಬೇಕೆಂದರು.
ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಸೈಯದ್ ಜಿಯಾವುಲ್ಲಾ, ಲೋಕಾಯುಕ್ತ ಅಭಿಯೋಜಕ ಮಲ್ಲೇಶಪ್ಪ, ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿ ಕಾರ್ಯದರ್ಶಿ ನವೀದ್ ಇವರುಗಳು ವೇದಿಕೆಯಲ್ಲಿದ್ದರು.