ಬೆಳಗಾವಿ: ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳು ಜನರಿಗೆ ಹೊಸ ಹೊಸ ಆಶ್ವಾಸನೆ ಕೊಡುತ್ತಾರೆ, ಹೊಸ ಹೊಸ ಯೋಜನೆಗಳನ್ನು ಹೇಳುತ್ತಾ ಇರುತ್ತಾರೆ. ಪ್ರಣಾಳಿಕೆಯಲ್ಲೂ ಹೊಸದೇನನ್ನೋ ನೀಡುತ್ತಾ ಇರುತ್ತಾರೆ. ಇದೀಗ ಜಿಲ್ಲೆಯಲ್ಲಿ ಗಿಫ್ಟ್ ಗಳನ್ನು ಹಂಚುವುದರೊಂದಿಗೆ ಮಹಿಳೆಯರು ಸೆಳೆಯಲು ಯತ್ನಿಸುತ್ತಿದ್ದಾರೆ.
ಬೆಳಗಾವಿ ಹಾಗೂ ಬಳ್ಳಾರಿಯಲ್ಲಿ ಗಿಫ್ಟ್ ಹಂಚುವ ಕಾರ್ಯ ಶುರುವಾಗಿದೆ. ಚುನಾವಣೆ ಹತ್ತಿರವಾಗುತ್ತಲೇ ಮಹಿಳೆಯರ ಅಡುಗೆ ಮನೆ ತುಂಬಿಸುತ್ತಿದ್ದಾರೆ. ಹೊಸ ಹೊಸ ಕುಕ್ಕರ್ ಗಳನ್ನು ನೀಡುತ್ತಿದ್ದಾರೆ. ಬೆಳಗಾವಿಯ ಹಿರೇಬಾಗೇವಾಡಿಯ ಕರ್ನಾಟಕ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಹೊಸ ಕುಕ್ಕರ್ ಹಂಚಿಕೆ ಕಾರ್ಯ ನಡೆದಿದೆ. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಮತದಾರರಿಗೆ ಕುಕ್ಕರ್ ನೀಡಿದ್ದಾರೆ ಎನ್ನಲಾಗುತ್ತಿದೆ.
ಇನ್ನು ಬಳ್ಳಾರಿಯಲ್ಲೂ ಇದೇ ಗಿಫ್ಟ್ ರಾಜಕೀಯ ನಡೆಯುತ್ತಿದ್ದು, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಭರತ್ ರೆಡ್ಡಿ, ಹೊಸ ಕುಕ್ಕರ್ ಗಳನ್ನು ನೀಡಿ ಜನರನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡಿದ್ದರು. ಆದ್ರೆ ಬಿಜೆಪಿಯ ಸೋಮಶೇಖರ್ ರೆಡ್ಡಿ ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ, ನೇರ ಜನರೆಡೆಗೆ ಹೋಗಿದ್ದಾರೆ. ಸ್ಲಂಗಳಲ್ಲಿ ವಾಸಿಸುವ ಜನರ ಬಳಿ ಹೋಗಿ ಹಕ್ಕು ಪತ್ರ ವಿತರಣೆ ಮಾಡಿದ್ದಾರೆ.