ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 01 : ಸುಪ್ರಿಂಕೋರ್ಟ್ ತೀರ್ಪಿನಂತೆ ಒಳ ಮೀಸಲಾತಿಯನ್ನು ಜಾರಿಗೊಳಿಸದಿದ್ದರೆ ಜನಪ್ರತಿನಿಧಿಗಳು ಯಾರೆ ಬರಲಿ ಪ್ರತಿ ಜಿಲ್ಲೆಯಲ್ಲಿ ಘೇರಾವ್ ಹಾಕಬೇಕೆಂದು ವಿಶ್ರಾಂತ ಹಿರಿಯ ಪ್ರಾಧ್ಯಾಪಕ ಗುಲ್ಬರ್ಗದ ಎಂ.ಟಿ.ಕಟ್ಟಿಮನಿ ಕರೆ ನೀಡಿದರು.
ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ನೌಕರರ ಒಕ್ಕೂಟ, ತುಮಕೂರು ರಾಜ್ಯ ಸಮಿತಿಯಿಂದ ಕ್ರೀಡಾ ಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಒಳ ಮೀಸಲಾತಿ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಬುದ್ದ, ಅಂಬೇಡ್ಕರ್, ಪ್ರೊ.ಬಿ.ಕೃಷ್ಣಪ್ಪ, ಪೆರಿಯಾರ್ ಇವರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಅನೇಕ ನಿಂದನೆ, ಅಪಹಾಸ್ಯ, ನೋವು, ಹಿಂಸೆ, ಅವಮಾನ ಅನುಭವಿಸಿ ಡಾ.ಬಿ.ಆರ್.ಅಂಬೇಡ್ಕರ್ ದೇಶಕ್ಕೆ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ್ದಾರೆ. ಸಂವಿಧಾನದ ಆಶಯ ಈಡೇರಬೇಕಾದರೆ ಸರ್ಕಾರ ಒಳ ಮೀಸಲಾತಿಯನ್ನು ತಕ್ಷಣವೆ ಅನುಷ್ಠಾನಗೊಳಿಸಬೇಕು. ಒಳ ಮೀಸಲಾತಿ ಜಾರಿಗಾಗಿ ಏಕ ಸದಸ್ಯ ಆಯೋಗ ನೇಮಕವಾಗಿದ್ದರು. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾರಿಗೊಳಿಸುವ ಬದಲು ಮಲ್ಲಿಕಾರ್ಜುನ ಖರ್ಗೆರವರ ಕಡೆ ಕೈಮಾಡಿ ತೋರಿಸುತ್ತ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಜಾಣ ನಡೆ ಪ್ರದರ್ಶಿಸುತ್ತಿದ್ದಾರೆ. ನಮ್ಮ ಸಮುದಾಯ ಇನ್ನು ಮೈಮರೆತು ಕೂರುವುದರಲ್ಲಿ ಅರ್ಥವಿಲ್ಲ ಎಂದು ಎಚ್ಚರಿಸಿದರು.
36 ಸಾವಿರ ವಿವಿಧ ಹುದ್ದೆಗಳ ನೇಮಕಾತಿಗೆ ಈಗಾಗಲೆ ನೋಟಿಫಿಕೇಷನ್ ಹೊರಡಿಸಲಾಗಿದೆ. ಒಳ ಮೀಸಲಾತಿ ಜಾರಿಯಾಗುವತನಕ ಎಲ್ಲಾ ನೇಮಕಾತಿಗಳನ್ನು ತಡೆಹಿಡಿಯಬೇಕು. ನಮ್ಮ ಸಮುದಾಯದ ಮುಖಂಡರು ಸಿದ್ದರಾಮಯ್ಯನವರ ಬಳಿ ಹೋಗಿ ಒಳ ಮೀಸಲಾತಿ ಜಾರಿಗೊಳಿಸಿ ಎಂದು ಬೇಡುತ್ತಿರುವುದನ್ನು ಬಿಟ್ಟರೆ ಪರಿಣಾಮಕಾರಿಯಾಗಿ ಏನು ಮಾಡಬೇಕು ಎನ್ನುವುದರ ಬಗ್ಗೆ ಯಾರು ಚಿಂತಿಸುತ್ತಿಲ್ಲದಿರುವುದೇ ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಸಾಮಾಜಿಕ ಸಂಘರ್ಷ ಸಮಿತಿ ರಾಜ್ಯ ಗೌರವಾಧ್ಯಕ್ಷ ಡಿ.ದುರುಗೇಶಪ್ಪ ಮಾತನಾಡುತ್ತ ಮೂವತ್ತು ವರ್ಷಗಳ ಹಿಂದೆ ಪ್ರೊ.ಬಿ.ಕೃಷ್ಣಪ್ಪ ನಾಯಕತ್ವದಲ್ಲಿ ಒಳ ಮೀಸಲಾತಿಗಾಗಿ ಹೋರಾಟ ಆರಂಭಿಸಲಾಯಿತು. ಅಂದಿನಿಂದ ಇಂದಿನವರೆಗೂ ಚಳುವಳಿ, ಪ್ರತಿಭಟನೆ, ಹೋರಾಟಗಳು ನಡೆಯುತ್ತಲಿದೆ. ಆದರೆ ಪ್ರತಿಫಲ ಇನ್ನು ಯಾರಿಗೂ ಸಿಕ್ಕಿಲ್ಲ. ಒಳ ಮೀಸಲಾತಿ ಜಾರಿಗೊಳಿಸುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗಿದೆಯೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ್ದರೂ ಸಹ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮ್ಮ ಸಮುದಾಯವನ್ನು ಇನ್ನು ಯಾಮಾರಿಸುತ್ತಲೆ ಬರುತ್ತಿರುವುದರ ವಿರುದ್ದ ಜಾಗೃತರಾಗಬೇಕೆಂದು ತಿಳಿಸಿದರು.
ಮಾದಿಗರಿಗೆ ಶೇ.6, ಒಲೆಯರಿಗೆ ಶೇ.5 ಹಾಗೂ ಇತರರಿಗೆ ಶೇ.3 ಪರ್ಸೆಂಟ್ ಮೀಸಲಾತಿ ನೀಡಬೇಕೆಂಬ ಕೂಗು ಕೇಳಿ ಬರುತ್ತಿದೆ. ರಾಜಕಾರಣಿಗಳನ್ನು ನಂಬಿಕೊಂಡು ನೌಕರ ವರ್ಗದವರಿಗೆ ಅನ್ಯಾಯ ಮಾಡಿದಂತಾಗಿದೆ. ಯಾವ ಅನುಕೂಲವನ್ನು ಪಡೆದಿಲ್ಲ. ಎಂದು ಹೇಳಿದರು.
ವಿಜಯನಗರದ ಗ್ಯಾನಪ್ಪ ಬಡಿಗೇರ್ ಮಾತನಾಡಿ ಒಳ ಮೀಸಲಾತಿಗಾಗಿ 35 ವರ್ಷಗಳಿಂದಲೂ ಹೋರಾಟ ಮಾಡಲಾಗುತ್ತಿದೆ. ಇನ್ನು ಅನುಷ್ಠಾನವಾಗಿಲ್ಲ. ಒಳ ಮೀಸಲಾತಿ ಜಾರಿಗೆ ಬರುವತನಕ ಸೂಕ್ತ ಸ್ಥಾನಮಾನ ಸಿಗುವುದಿಲ್ಲ. ಸುಪ್ರೀಂಕೋರ್ಟ್ ತೀರ್ಪಿನಂತೆ ಒಳ ಮೀಸಲಾತಿ ಜಾರಿಯಾದರೆ ಆಯಾ ಜನಸಂಖ್ಯೆಗುನುಗುಣವಾಗಿ ಪಾಲು ಸಿಗುತ್ತದೆ. ಯಾರ ಹಕ್ಕನ್ನು ಯಾರು ಕಸಿದುಕೊಳ್ಳುವುದಿಲ್ಲ. ಜಾತಿ ಅಭಿಮಾನ ಮೂಡಿಸಿಕೊಂಡು ಸಂಘಟಿತರಾಗದಿದ್ದರೆ ಆಳುವ ಸರ್ಕಾರಗಳು ನಮ್ಮ ಕಡೆಗಣಿಸುತ್ತಲೆ ಬರುತ್ತವೆ ಎಂದರು.
ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಹಿರೇಹಳ್ಳಿ ಮಲ್ಲಿಕಾರ್ಜುನ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ರಾಮಣ್ಣ, ಭೀಮಾಶಂಕರ್ ಐ.ಆರ್.ಎಸ್. ಇವರುಗಳು ವೇದಿಕೆಯಲ್ಲಿದ್ದರು.