ಸುದ್ದಿಒನ್, ಹಿರಿಯೂರು, ಜೂನ್. 03 : ಕರ್ನಾಟಕ ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದಿಂದ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಸಮುದಾಯದ ಬಂಧುಗಳು ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಕಾಡುಗೊಲ್ಲರ ರಾಜ್ಯಾಧ್ಯಕ್ಷರು ಹಾಗೂ ಬಿಬಿಎಂಪಿ ಮಾಜಿ ಸದಸ್ಯ ಶ್ರೀ ರಾಜಣ್ಣ ಮನವಿ ಮಾಡಿದ್ದಾರೆ.
ಪತ್ರಿಕಾ ಪ್ರಕಟಣೆ ಹೇಳಿಕೆ ನೀಡಿರುವ ಅವರು ಸಮುದಾಯದ ಅಭಿವೃದ್ಧಿಗಾಗಿ ಸರ್ಕಾರ ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಿ ಅದಕ್ಕೆ ಅನುದಾನ ಮೀಸಲಿರಿಸಿದೆ. ಚಿತ್ರದುರ್ಗ, ತುಮಕೂರು, ಹಾಸನ, ಚಿಕ್ಕಮಗಳೂರು, ರಾಮನಗರ, ದಾವಣಗೆರೆ, ಬೆಂಗಳೂರು ಗ್ರಾಮಾಂತರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ವಾಸವಾಗಿರುವ ಕಾಡುಗೊಲ್ಲ ಸಮುದಾಯದವರು ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ಪಡೆದುಕೊಂಡು ಸೌಲಭ್ಯ ಪಡೆಯಬೇಕು ಎಂದು ತಿಳಿಸಿದರು.
ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆ, ಸ್ವಯಂ ಉದ್ಯೋಗ ನೇರಸಾಲ ಯೋಜನೆ, ಅರಿವು ಶೈಕ್ಷಣಿಕ ನೇರಸಾಲ ಯೋಜನೆ, ಸ್ವಯಂ ಉದ್ಯೋಗ ನೇರಸಾಲ, ಸ್ವಾವಲಂಬಿ ಸಾರಥಿ ಯೋಜನೆ, ವಿದೇಶಿ ವ್ಯಾಸಂಗ ಯೋಜನೆ ಸೇರಿದಂತೆ ವಿವಿಧ ಯೋಜನೆಗಳನ್ನು ಪಡೆಯಲು ನಿಗದಿತ ಸಮಯದೊಳಗೆ ಬೆಂಗಳೂರು -ಒನ್, ಕರ್ನಾಟಕ -ಒನ್, ಅಟಲ್ ಜಿ ಜನಸ್ನೇಹಿ ಕೇಂದ್ರ ಮತ್ತು ನಾಗರೀಕ ಸೇವಾ ಕೇಂದ್ರಗಳಲ್ಲಿ ಅನ್ ಲೈನ್ ಮೂಲಕ ಅರ್ಜಿ ಸಲ್ಲಿಸಿಕೊಂಡು ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಸ್ಥಳೀಯ ಮುಖಂಡರು ಹಾಗೂ ಸಂಘದ ಪದಾಧಿಕಾರಿಗಳು ಸಮುದಾಯದವರಿಗೆ ತಿಳಿಸಿ ಯೋಜನೆಗಳನ್ನು ಪಡೆಯುವಂತೆ ಸಹಕರಿಸಬೇಕು ಎಂದು ರಾಜಣ್ಣ ಅವರು ಮನವಿ ಮಾಡಿದರು.






