ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ,(ಡಿ.28): ಶಾಲಾ-ಕಾಲೇಜು ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳದಿದ್ದರೆ ಕೇವಲ ಅಂಕಪಟ್ಟಿಗಷ್ಟೆ ಸೀಮಿತವಾಗಬೇಕಾಗುತ್ತದೆ ಎಂದು ಕೇಂದ್ರ ಮಂತ್ರಿ ಎ.ನಾರಾಯಣಸ್ವಾಮಿ ತಿಳಿಸಿದರು.
ಪೇ ಬ್ಯಾಕ್ ಟು ಸೊಸೈಟಿ ಆಶಯದಂತೆ ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ವತಿಯಿಂದ ಸರ್ಕಾರಿ ಕಲಾ ಕಾಲೇಜಿನಲ್ಲಿ ಬುಧವಾರ ಆಯೋಜಿಸಲಾಗಿದ್ದ ಪೊಲೀಸ್ ನೇಮಕಾತಿ ತರಬೇತಿ ಶಿಬಿರಾರ್ಥಿಗಳಿಗೆ ಸ್ಪರ್ಧಾತ್ಮಕ ಪುಸ್ತಕ ವಿತರಣಾ ಸಮಾರಂಭದಲ್ಲಿ ಪುಸ್ತಕಗಳನ್ನು ವಿತರಿಸಿ ಮಾತನಾಡಿದರು.
ಬಹಳಷ್ಟು ರಾಜಕಾರಣಿಗಳು ಮಾತನಾಡುತ್ತಾ ಚರ್ಚೆಯಲ್ಲಿ ತೊಡಗುತ್ತಾರೆ. ಆದರೆ ಯಾವುದೂ ಕಾರ್ಯರೂಪಕ್ಕೆ ಬರುವುದಿಲ್ಲ. ಆದರೆ ನಾನು ಅಂತಹ ರಾಜಕಾರಣಿಯಲ್ಲ. ಮತ್ತೊಬ್ಬರ ನೋವನ್ನು ನನ್ನದೆಂದು ಸ್ವೀಕರಿಸಿ ಸಮಸ್ಯೆಗಳಿಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಸಂವಿಧಾನದಲ್ಲಿ ಏನು ಅಡಕವಾಗಿದೆ.
ಪರಿಶಿಷ್ಟ ಜಾತಿಗಳ ಅಭಿವೃದ್ದಿಗಾಗಿ ಇರುವ ಹಣವನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವ ಪರಿಕಲ್ಪನೆ ಬಹಳಷ್ಟು ರಾಜ್ಯಗಳಿಗೆ ಈಗಲೂ ಇಲ್ಲದಿರುವುದು ನೋವಿನ ಸಂಗತಿ. ತರಬೇತಿ ಜೀವನದ ಗುರಿಗೆ ಉಪಯುಕ್ತವಾಗಬೇಕು.
ಬ್ಯಾಕ್‍ಲಾಗ್ ಹುದ್ದೆಗಳು ಎಷ್ಟು ಖಾಲಿಯಿವೆ. ಇನ್ನು ಏಕೆ ಭರ್ತಿಯಾಗಿಲ್ಲ. ವಿಜ್ಞಾನಿಗಳು, ಐ.ಎ.ಎಸ್.ಅಧಿಕಾರಿಗಳು ಎಷ್ಟು ಮಂದಿಯಿದ್ದಾರೆನ್ನುವ ಸಾಮಾನ್ಯ ಜ್ಞಾನವನ್ನು ತಿಳಿದುಕೊಂಡಿರಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಹಿರಿಯರ ಬದ್ದತೆಯನ್ನು ಅನುಸರಿಸುವ ಕಿರಿಯರಿಗೆ ಅನೇಕ ಮಾರ್ಗದರ್ಶನಗಳಿವೆ. ಸಮಾಜದ ವಿವಿಧ ರಂಗಗಳಲ್ಲಿ ಹೇಗೆ ಸ್ಪರ್ಧೆಗೆ ತಯಾರಾಗಬೇಕೆನ್ನುವ ರೂಪುರೇಷೆಗಳನ್ನು ತಯಾರಿಸುವ ಪ್ರಯತ್ನ ಎಲ್ಲಿಯವರೆಗೂ ಆಗುವುದಿಲ್ಲವೋ ಅಲ್ಲಿಯತನಕ ಶಿಕ್ಷಣ ಎನ್ನುವುದು ಕೇವಲ ಅಂಕಪಟ್ಟಿಗಷ್ಠೆ ಮೀಸಲಾಗಿ ದಿನದಿಂದ ದಿನ ನಿರುದ್ಯೋಗಿಗಳ ಸಂಖ್ಯೆ ಜಾಸ್ತಿಯಾಗುತ್ತಲೆ ಇರುತ್ತದೆ.
ಶಿಕ್ಷಣದ ನಂತರ ಸಮಾಜ ಹಾಗೂ ತನ್ನ ಮುಂದಿರುವ ಸವಾಲುಗಳ ಬಗ್ಗೆ ಅನ್ವೇಷಣೆ ಮಾಡಿಕೊಳ್ಳದಿದ್ದರೆ ಜೀವನ ಕಷ್ಠವಾಗುತ್ತದೆ. ಶಿಕ್ಷಣದ ನಂತರ ಮುಂದಿನ ಗುರಿ ಏನು ಎನ್ನುವ ತೀರ್ಮಾನಕ್ಕೆ ಬರದಿದ್ದರೆ ಜೀವನದಲ್ಲಿ ಯಾವ ಸಾಧನೆ ಮಾಡಲು ಆಗುವುದಿಲ್ಲ. ಸರ್ಕಾರ ಎಲ್ಲಾ ಸೌಲಭ್ಯಗಳನ್ನು ಶಿಕ್ಷಣಕ್ಕಾಗಿ ನೀಡುತ್ತಿದ್ದರೂ ಶಾಲೆ ಬಿಡುವವರ ಸಂಖ್ಯೆ ಜಾಸ್ತಿಯಾಗುತ್ತಲಿದೆ ಎಂದು ವಿಷಾಧಿಸಿದರು.
ಶಿಕ್ಷಣದ ಜೊತೆ ತಾಂತ್ರಿಕತೆ, ವಿಶ್ವದ ಪರಿಚಯ, ಸಾಮಾನ್ಯ ಜ್ಞಾನ, ವ್ಯಕ್ತಿತ್ವ ರೂಪಿಸಿಕೊಳ್ಳದಿದ್ದರೆ ಎಷ್ಟೆ ಪದವಿಗಳನ್ನು ಪಡೆದರೂ ಉಪಯೋಗವಿಲ್ಲ. ಎಲ್ಲರೂ ಮೀಸಲಾತಿ ಕೇಳುತ್ತಿದ್ದಾರೆ. ಈಗಾಗಲೆ ಶೇ.95 ರಷ್ಟು ಕೊಟ್ಟಿದ್ದೇವೆ. ಉದ್ಯೋಗಕ್ಕೆ ಶಿಕ್ಷಣದ ಜೊತೆ ಪರಿಣಿತಿ, ಸಾಮಾನ್ಯ ಜ್ಞಾನ ಬೇಕಾಗಿರುವುದರಿಂದ ದಿನಕ್ಕೆ ಒಂದು ಗಂಟೆಯಾದರೂ ದಿನಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಿ. ಸಾಮಾನ್ಯ ಜ್ಞಾನ ಹೆಚ್ಚುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಮಾತನಾಡಿ ಸಿರಾ, ಪಾವಗಡ ಸೇರಿದಂತೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದ ಒಂಬತ್ತು ತಾಲ್ಲೂಕಿನ 127 ವಿದ್ಯಾರ್ಥಿಗಳು ಪೊಲೀಸ್ ನೇಮಕಾತಿ ತರಬೇತಿಗೆ ಹಾಜರಾಗಿದ್ದು, ಸರ್ಕಾರದಲ್ಲಿನ ಸೌಲಭ್ಯಗಳನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವ ಉದ್ದೇಶವಿಟ್ಟುಕೊಂಡು ವಿದ್ಯಾರ್ಥಿ ಪರಿಷತ್ ಮೊದಲಿನಿಂದಲೂ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ.
ಬೇರೆ ಊರುಗಳಿಗೆ ಹೋಗಿ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆದುಕೊಳ್ಳುವುದು ಚಿತ್ರದುರ್ಗ ಜಿಲ್ಲೆಯ ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತದೆ. ಅಷ್ಟೊಂದು ಮೊತ್ತ ಭರಿಸಲು ಪೋಷಕರಿಂದ ಸಾಧ್ಯವಿಲ್ಲ. ಹಾಗಾಗಿ ತರಬೇತಿ ವಿಚಾರವನ್ನು ಕೇಂದ್ರ ಮಂತ್ರಿ ಎ.ನಾರಾಯಣಸ್ವಾಮಿರವರ ಗಮನಕ್ಕೆ ತಂದಾಗ ಗಂಭೀರವಾಗಿ ಪರಿಗಣಿಸಿ ಅಗತ್ಯ ಹಣಕಾಸಿನ ನೆರವು ನೀಡಲು ಒಪ್ಪಿಕೊಂಡಿದ್ದು, ಇದರ ಪ್ರಯೋಜನ ಪಡೆದುಕೊಳ್ಳಿ ಎಂದು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು.
ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ, ಉಪಾಧ್ಯಕ್ಷ ಸಂಪತ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್‍ಯಾದವ್, ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲರಾದ ಬಿ.ಟಿ.ತಿಪ್ಪೇರುದ್ರಸ್ವಾಮಿ, ರಾಜು, ಗಂಗಾಧರಪ್ಪ, ಪ್ರೊ.ನಾಗರಾಜ್ ವೇದಿಕೆಯಲ್ಲಿದ್ದರು.