ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 05 : ಧರ್ಮದ ಹೆಸರಿನಲ್ಲಿ ನಡೆಯುವ ಕ್ರೌರ್ಯವನ್ನು ತಮ್ಮ ಕಠೋರವಾದ ಬರವಣಿಗೆ ಮೂಲಕ ಟೀಕಿಸುತ್ತಿದ್ದ ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್‍ರನ್ನು ಶೂಟ್‍ಔಟ್ ಮಾಡಿದ್ದು, ನಿಜಕ್ಕೂ ದೊಡ್ಡ ದುರಂತ ಎಂದು ಸಮಾಜ ಚಿಂತಕ ಜೆ.ಯಾದವರೆಡ್ಡಿ ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ಭವನದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಪತ್ರಕರ್ತೆ ಗೌರಿ ಲಂಕೇಶ್ ನೆನಪು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸನಾತನ ಧರ್ಮವನ್ನು ಧಿಕ್ಕರಿಸಿ ಪ್ರಶ್ನೆ ಮಾಡುವವರೆಲ್ಲಾ ಹತ್ಯೆಯಾದಂತೆ ಗೌರಿ ಲಂಕೇಶ್ ಕೂಡ ಬಲಿಯಾದರು.
ನಕ್ಸಲೈಟ್‍ಗಳನ್ನು ಭೇಟಿಯಾಗಿ ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಿದ್ದರು. ಅಹಿಂಸೆಯಂತ ಶ್ರೇಷ್ಠ ಧರ್ಮ ಬೇರೊಂದಿಲ್ಲ ಎಂದು ಪ್ರತಿಪಾದಿಸುತ್ತಿದ್ದ ಗೌರಿ ಲಂಕೇಶ್ ಆದಿವಾಸಿ ಚಳುವಳಿ ಬಗ್ಗೆ ತಮ್ಮ ಪತ್ರಿಕೆಯಲ್ಲಿ ಬರೆದರು. ನ್ಯಾಯಾಂಗ ವ್ಯವಸ್ಥೆಯನ್ನು ಟೀಕಿಸುತ್ತಿದ್ದ ಎದೆಗಾರಿಕೆ ಅವರಲ್ಲಿತ್ತು ಎಂದು ಸ್ಮರಿಸಿದರು.
ರಾಜಕೀಯ ಕ್ಷೇತ್ರದಲ್ಲಿನ ಪಲ್ಲಟಗಳು ಕೋಮುವಾದಿ ಅಜೆಂಡಾ ಹಿಡಿದು ರಾಜಕೀಯ ಲಾಭ ಪಡೆದುಕೊಳ್ಳುತ್ತಿರುವವರನ್ನು ಕಟುವಾಗಿ ನಿಂದಿಸುತ್ತಿದ್ದ ಗೌರಿ ಲಂಕೇಶ್ ಹಿಂದುತ್ವ ಎನ್ನುವುದು ಅಪ್ರಸ್ತುತ. ಸಂವಿಧಾನ ಬಾಹಿರ ಎಂದು ಹೇಳುತ್ತಿದ್ದರು. ಹಿಂದೂ ಧರ್ಮದ ಬಗ್ಗೆ ಅವರಲ್ಲಿ ಅಪಾರವಾದ ಗೌರವವಿತ್ತು. ಜಾಗತಿಕ ಹಿಂಸೆಯ ಕರಾಳ ಮುಖದ ಬಗ್ಗೆ ಕಠಿಣವಾದ ಪದಗಳನ್ನು ಬಳಸುತ್ತಿದ್ದರು. ಕೋಮು ಸೌರ್ಹಾಧ ವೇದಿಕೆಗೆ ಪ್ರವೇಶಿಸಿ ಅದಕ್ಕೊಂದು ಹೊಸ ತಿರುವು ಕೊಟ್ಟರು.
ಕರ್ನಾಟಕದಲ್ಲಿ ತನ್ನದೆ ಆದ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ. ಅವರ ಹತ್ಯೆಯಾದಾಗ ವಿಶ್ವಸಂಸ್ಥೆಯಲ್ಲಿಯೂ ಶೋಕ ಆಚರಿಸಿದರು ಎನ್ನುವುದಾದರೆ ಅವರ ವಿಚಾರಧಾರೆ ಜೀವಪರವಾಗಿತ್ತು ಎನ್ನುವುದಕ್ಕೆ ಸಾಕ್ಷಿ. ಸಾರ್ವಕರ್ ನಿಜ ಬಣ್ಣವನ್ನು ನಾಲ್ಕು ಹಂತಗಳಲ್ಲಿ ಬರೆದರು. ಜೀವಪರ, ಜನಪರ ಪತ್ರಿಕೋದ್ಯಮಕ್ಕೆ ಮಾದರಿಯಾಗಿದ್ದರು ಎಂದು ಗುಣಗಾನ ಮಾಡಿದರು.
ನಿವೃತ್ತ ಪ್ರಾಚಾರ್ಯರಾದ ಡಾ.ಅಶೋಕ್‍ಕುಮಾರ್ ಸಂಗೇನಹಳ್ಳಿ ಮಾತನಾಡಿ ಗೌರಿ ಲಂಕೇಶ್ ಹತ್ಯೆಯಾಗಿರಬಹುದು. ಆದರೆ ಅವರ ದಿಟ್ಟತನ ಇನ್ನು ಜೀವಂತವಾಗಿದೆ. ಯುವಕರು, ವಿದ್ಯಾರ್ಥಿಗಳು, ಹೋರಾಟಗಾರರಲ್ಲಿ ಆತ್ಮಸ್ಥೈರ್ಯ ತುಂಬುವ ತಾಕತ್ತಿದ್ದುದರಿಂದಲೆ ತಂದೆ ಲಂಕೇಶ್‍ರನ್ನು ಮೀರಿ ಬೆಳೆದರು. ಅವರ ಹೋರಾಟದ ಚಿಲುಮೆ ಇನ್ನು ಬತ್ತಿಲ್ಲ ಎಂದು ನೆನಪಿಸಿಕೊಂಡರು.
ಹಿರಿಯ ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ ಮಾತನಾಡುತ್ತ ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಿದ ಗೌರಿ ಲಂಕೇಶ್ ಆದಿವಾಸಿಗಳ ಪರವಾಗಿದ್ದರು. ಕೋಮು ಸೌರ್ಹಾಧ ವೇದಿಕೆ ಮೂಲಕ ಬಾಬಾಬುಡನ್‍ಗಿರಿಗೆ ಹೋಗುತ್ತಿದ್ದರು. ಎಂತಹ ಕಠಿಣ ಸಂದರ್ಭದಲ್ಲೂ ಹೆದರದಂತ ಎದೆಗಾರಿಕೆ ಅವರದಾಗಿತ್ತು. ಅಂತಹ ದಿಟ್ಟ ಪತ್ರೆಕರ್ತೆಯನ್ನು ಗುರಿಯಾಗಿರಿಸಿಕೊಂಡು ಶೂಟ್‍ಔಟ್ ಮಾಡಿದ್ದು, ಅತ್ಯಂತ ಕ್ರೂರತನ. ಕಲ್ಬುರ್ಗಿಯನ್ನು ಕೊಂದಿದ್ದು, ನೋವಿನ ಸಂಗತಿ. ಅವರ ಆಲೋಚನೆ, ತತ್ವ, ಸಿದ್ದಾಂತ ಇನ್ನು ಜೀವಂತವಾಗಿದೆ ಎಂದು ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಗೌಡಗೆರೆ ಪತ್ರಕರ್ತೆ ಗೌರಿ ಲಂಕೇಶ್ ಹೋರಾಟದ ಕುರಿತು ಮಾತನಾಡಿದರು.