ಬೆಂಗಳೂರು : ರಾಜ್ಯದಲ್ಲಿ ಅಡುಗೆ ಅನಿಲ (ಎಲ್ಪಿಜಿ) ಕೊರತೆ ಉಂಟಾಗುತ್ತಿರುವ ಹಿನ್ನೆಲೆ ಪರ್ಯಾಯ ಇಂಧನ ಸಾಧನಗಳತ್ತ ಜನರು ಮುಖ ಮಾಡುತ್ತಿರುವುದು ಕಂಡುಬರುತ್ತಿದೆ. ಈ ಸಂದರ್ಭದಲ್ಲಿ ಬೆಂಗಳೂರಿನ ನಿವಾಸಿಯೊಬ್ಬರು ತಯಾರಿಸಿದ ‘ರಾಕೆಟ್ ಸ್ಟೌವ್’ ಜನರ ಗಮನ ಸೆಳೆಯುತ್ತಿದೆ.
ಬೆಂಗಳೂರಿನ 65 ವರ್ಷದ ಅಶೋಕ್ ಅರಸ್ ಅವರು ಸುಮಾರು ಆರು ವರ್ಷಗಳ ಹಿಂದೆ ಅಭಿವೃದ್ಧಿಪಡಿಸಿದ ಈ ‘ರಾಕೆಟ್ ಸ್ಟೌವ್’ ಈಗ ಹೆಚ್ಚಿನ ಬೇಡಿಕೆ ಪಡೆಯುತ್ತಿದೆ. ಅಡುಗೆ ಅನಿಲ ಸಿಲಿಂಡರ್ಗಳ ಕೊರತೆಯಿಂದಾಗಿ ಹೋಟೆಲ್ಗಳು, ಪಿಜಿ ವಸತಿ ಗೃಹಗಳು ಮತ್ತು ಮನೆಗಳಲ್ಲಿ ಪರ್ಯಾಯ ಅಡುಗೆ ವ್ಯವಸ್ಥೆ ಹುಡುಕುತ್ತಿರುವ ಹಿನ್ನೆಲೆಯಲ್ಲಿ ಹಲವು ಕಡೆಗಳಿಂದ ಅವರಿಗೆ ಕರೆಗಳು ಬರುತ್ತಿವೆ ಎಂದು ತಿಳಿದುಬಂದಿದೆ.
ಹಿಂದೆ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದಲ್ಲಿ (ಒಎನ್ಜಿಸಿ) ಭಾರತದಲ್ಲೂ ಹಾಗೂ ವಿದೇಶದಲ್ಲೂ ಕೆಲಸ ಮಾಡಿರುವ ಅಶೋಕ್ ಅರಸ್, ಗ್ರಾಮೀಣ ಪ್ರದೇಶಗಳ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಈ ಸ್ಟೌವ್ ವಿನ್ಯಾಸಗೊಳಿಸಿದ್ದಾಗಿ ತಿಳಿಸಿದ್ದಾರೆ.ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಅನೇಕರು ಕಟ್ಟಿಗೆ ಬಳಸಿ ತೆರೆದ ಬೆಂಕಿಯಲ್ಲಿ ಅಡುಗೆ ಮಾಡುತ್ತಾರೆ. ಇದರಿಂದ ಹೆಚ್ಚು ಕಟ್ಟಿಗೆ ಬಳಸುವ ಜೊತೆಗೆ ಹೊಗೆ ಹೆಚ್ಚಾಗಿ ಉಂಟಾಗುತ್ತದೆ. ಕಡಿಮೆ ಇಂಧನ ಬಳಸಿ ಅದೇ ಅಡುಗೆ ಕಾರ್ಯವನ್ನು ಮಾಡಬಹುದೆಂಬುದನ್ನು ತೋರಿಸಲು ಈ ‘ರಾಕೆಟ್ ಸ್ಟೌವ್’ ಅನ್ನು ನಿರ್ಮಿಸಿದ್ದಾಗಿ ಅವರು ಹೇಳಿದ್ದಾರೆ.
ಸಾಂಪ್ರದಾಯಿಕ ಕಟ್ಟಿಗೆ ಒಲೆಗಳಲ್ಲಿ ಅಡುಗೆ ಮಾಡುವಾಗ ಅಡುಗೆಮನೆಯಲ್ಲಿ ಹೊಗೆ ತುಂಬಿ ಕಣ್ಣು ಹಾಗೂ ಶ್ವಾಸಕೋಶಕ್ಕೆ ಹಾನಿ ಉಂಟಾಗುವ ಸಾಧ್ಯತೆ ಇದೆ. ಈ ಸಮಸ್ಯೆಯನ್ನು ಕಡಿಮೆ ಮಾಡಲು ಈ ಸ್ಟೌವ್ ಸಹಕಾರಿಯಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
ಈ ರಾಕೆಟ್ ಸ್ಟೌವ್ನಲ್ಲಿ ಕಟ್ಟಿಗೆ ಸಂಪೂರ್ಣವಾಗಿ ಉರಿದು ಹೆಚ್ಚಿನ ತಾಪಮಾನ ಉತ್ಪತ್ತಿಯಾಗುವುದರಿಂದ ಕಡಿಮೆ ಹೊಗೆ ಉಂಟಾಗುತ್ತದೆ. ಇದರಿಂದ ಇಂಧನ ಉಳಿತಾಯವಾಗುವ ಜೊತೆಗೆ ಪರಿಸರದ ಮೇಲಿನ ಪರಿಣಾಮವೂ ಕಡಿಮೆಯಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.






