ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 01 : ಜಿಲ್ಲೆಯಲ್ಲಿ ಶಾಲಾ ಕಾಲೇಜು ಮಕ್ಕಳ ಕೈಗಳಿಗೆ ಗಾಂಜಾ ಅಥವಾ ಮಾದಕ ವಸ್ತುಗಳ ಪೂರೈಕೆ ಆಗುತ್ತಿರುವ ಬಗ್ಗೆ ಹೊಳಲ್ಕೆರೆ ಶಾಸಕ ಡಾ. ಎಂ. ಚಂದ್ರಪ್ಪ ಅವರು ಕಳವಳ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಈ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಾಪಕ ದೂರುಗಳು ಕೇಳಿಬರುತ್ತಿವೆ. ಸಣ್ಣ ಸಣ್ಣ ಮಕ್ಕಳು ಇಂತಹ ದುಶ್ಚಟಗಳಿಗೆ ಬಲಿಯಾದರೆ ಭವಿಷ್ಯದ ಸಮಾಜದ ಗತಿ ಏನು. ಅಬಕಾರ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳು ಜಂಟಿಯಾಗಿ ಸಮನ್ವಯ ಮಾಡಿಕೊಂಡು, ಇದಕ್ಕೆ ಕಡಿವಾಣ ಹಾಕಬೇಕು. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯಲ್ಲಿ ಇಂತಹ ಯಾವುದೇ ಪ್ರಕರಣಗಳು ಕಂಡುಬಂದರೂ, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಮ್ಲನ್ ಆದಿತ್ಯ ಬಿಸ್ವಾಸ್ ಪ್ರತಿಕ್ರಿಯಿಸಿ, ಶಾಲಾ ಶಿಕ್ಷಕರುಗಳು ಈ ಬಗ್ಗೆ ಸಾಕಷ್ಟು ನಿಗಾ ವಹಿಸಬೇಕು. ಮಕ್ಕಳ ನಡವಳಿಕೆ ಬದಲಾವಣೆ ಬಗ್ಗೆ ಗಮನಿಸುತ್ತಿರಬೇಕು. ಯಾವುದೇ ಅನುಮಾನ ಕಂಡುಬಂದರೂ, ಪ್ರಾಥಮಿಕ ಪರಿಶೀಲನೆ ನಡೆಸಿ, ಖಚಿತಪಟ್ಟಲ್ಲಿ, ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕು ಎಂದರು.
ಜಿಲ್ಲೆಯ ಚಳ್ಳಕೆರೆ, ಹಿರಿಯೂರು, ಹೊಸದುರ್ಗ ತಾಲ್ಲೂಕುಗಳಲ್ಲಿ ಸರಗಳ್ಳತನ, ಮನೆ ಕಳುವು, ದರೋಡೆ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಜನರು ರಾತ್ರಿ ವೇಳೆ ಹೊರಬರಲು ಭಯ ಪಡುವಂತಾಗುತ್ತಿದೆ. ಹೀಗಾಗಿ ಪೊಲೀಸ್ ಇಲಾಖೆಯವರು ಕಳ್ಳರನ್ನು ಹಿಡಿದು ಮಟ್ಟ ಹಾಕುವ ಕೆಲಸ ಮಾಡಬೇಕು, ಜನರಲ್ಲಿ ಇಲಾಖೆ ಬಗ್ಗೆ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು ಎಂದರು.
ಇದಕ್ಕೆ ಉತ್ತರಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು, ಕಳ್ಳತನವನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಈಗಾಗಲೆ ವ್ಯಾಪಕ ಕ್ರಮಗಳನ್ನು ಕೈಗೊಂಡಿದೆ. ರಾತ್ರಿ ವೇಳೆ ಗಸ್ತು, ಪೆಟ್ರೂಲಿಂಗ್ ಕಾರ್ಯವನ್ನು ಹೆಚ್ಚು ಚುರುಕುಗೊಳಿಸಿದ್ದು, ರಾತ್ರಿ ವೇಳೆ ಅನುಮಾನಾಸ್ಪದವಾಗಿ ತಿರುಗಾಡುವವರನ್ನು ವಿಚಾರಿಸುವುದು, ಪ್ರಕರಣದ ಬಗ್ಗೆ ತನಿಖೆ ಚುರುಕುಗೊಳಿಸಿ, ಕಳ್ಳರನ್ನು ಪತ್ತೆ ಮಾಡುವ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.

